ಸಿಂದಗಿ ತಾಲೂಕಿನ ಪಡಗಾನೂರ ಗ್ರಾಮದ ಸೋಮವೇಶ್ವರ ದೇವಸ್ಥಾನಕ್ಕೆ ಬಿಜೆಪಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಂಸದ ಗೋವಿಂದ ಕಾರಜೋಳ, ಮಹೇಶ ಟೆಂಗಿನಕಾಯಿ, ಅರುಣ ಶಹಾಪುರ ಮತ್ತಿತರರಿದ್ದಾರೆ.  
ನ್ಯೂಸ್

ವಕ್ಫ್ ಆಸ್ತಿ ವಿವಾದ ಹಿನ್ನೆಲೆ, ಬಿಜೆಪಿ ಸಮಿತಿಯಿಂದ ಪರಿಶೀಲನೆ-ಅಹವಾಲು ಸ್ವೀಕಾರ

ವಿಜಯಪುರ: ವಕ್ಫ್ ಆಸ್ತಿ ವಿವಾದ ಹಾಗೂ ರೈತ ಸಮುದಾಯ ಆತಂಕಗೊಂಡ ಹಿನ್ನೆಲೆ ಬಿಜೆಪಿಯಿಂದ ರಚಿಸಲಾದ ಸಂಸದ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ಶಾಸಕರು ಹಾಗೂ ಮುಖಂಡರನ್ನೊಳಗೊಂಡ ತಂಡ ಮಂಗಳವಾರ ಜಿಲ್ಲೆಗೆ ಭೇಟಿ ನೀಡಿ ಅಹವಾಲು ಆಲಿಸಿತು. ಅಧಿಕಾರಿಗಳೊಂದಿಗೆ ಚರ್ಚಿಸಿತು. ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿತು.

ಸಿಂದಗಿಯ ವಿರಕ್ತಮಠ, ಪಡಗಾನೂರ, ಹಡಗಲಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಲಾಯಿತು. ಬಳಿಕ ವಿಜಯಪುರದ ಅಥಣಿ ರಸ್ತೆಯಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಸಭೆ ನಡೆಸಿ ರೈತರ ಅಹವಾಲು ಸ್ವೀಕರಿಸಿತು. ಸಂಜೆ ಹೊನವಾಡ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ರೈತರ ಸಮಸ್ಯೆ ಆಲಿಸಿತು. ಶಾಸಕರಾದ ಹರೀಶ ಪೂಂಜಾ, ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಮತ್ತಿತರರಿದ್ದರು.