ನ್ಯೂಸ್

ವಕ್ಫ್ ವಿವಾದ, ಬಿಜೆಪಿ ಮತ್ತೊಂದು ಬಣದಿಂದ ಜನ ಜಾಗೃತಿ ಅಭಿಯಾನ

ಬೆಂಗಳೂರು: ವಕ್ಫ್ ವಿವಾದದ ವಿರುದ್ಧ ಬೀದರ್ ನಿಂದ ಚಾಮರಾಜನಗರದವರೆಗೆ ನವೆಂಬರ್ 25 ರಿಂದ ಡಿಸೆಂಬರ್ 25ರವರೆಗೆ ಜನ ಜಾಗೃತಿ ಅಭಿಯಾನ ನಡೆಯಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಸೆಳೆದು, ಸಮಸ್ಯೆ ಬಗೆಹರಿಸಲು ಒತ್ತಾಯಿಸುವುದು ಈ ಚಳವಳಿಯ ಮುಖ್ಯ ಉದ್ದೇಶ.

ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ರಮೇಶ್‌ಜಾರಕಿಹೊಳಿ ಹಾಗೂ ಕುಮಾರ ಬಂಗಾರಪ್ಪ ಜಂಟಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಈ ವಿಷಯ ತಿಳಿಸಿದರು.

ವಕ್ಫ್ ನಿಂದ ಬಾಧಿತ ಜನರು ಅಹವಾಲು ಸಲ್ಲಿಸಲು ವಾರ್ ರೂಮ್ (ವಾಟ್ಸಪ್ ನಂಬರ್ 9035675734) ಸ್ಥಾಪನೆ. ಯಾರೇ ಆಗಲಿ ವಾರ್ ರೂಮ್ ಗೆ ಸಂಪರ್ಕಿಸಿ ಮಾಹಿತಿ ನೀಡಲು ಅವಕಾಶ.

1954 ರಿಂದ ಎಲ್ಲ ಗೆಜೆಟ್ ಗಳನ್ನು ರದ್ದುಪಡಿಸಬೇಕು, ರೈತರು, ಮಠ-ಮಂದಿರಗಳು, ಸರ್ಕಾರಿ ಜಮೀನುಗಳನ್ನು ಕಾಯಂ ಆಗಿ ವಾಪಸ್ ಮಾಡಬೇಕು.

ಅನ್ವರ್ ಮಾಣಿಪ್ಪಾಡಿ ವರದಿ ಪ್ರಕಾರ ವಕ್ಫ್ ಜಮೀನು ಕಬಳಿಸಿದವರು, ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಭಿಯಾನ ನಡೆಸಲಿದ್ದೇವೆ.

ಅಭಿಯಾನದ ವೇಳೆ ಸಮಸ್ಯಾತ್ಮಕ ಹಳ್ಳಿಗಳಿಗೆ ಭೇಟಿ, ಚರ್ಚೆ,‌ ಅಗತ್ಯವಿರುವೆಡೆ ಸಭೆ ನಡೆಯಲಿದೆ. ನ.25ರಂದು ಬೀದರ್ ನಲ್ಲಿ ಈ ಅಭಿಯಾನ ಶುರುವಾಗಲಿದೆ. ಡಿಸೆಂಬರ್ ಒಂದಕ್ಕೆ ಮೊದಲ ಹಂತದ ಪ್ರವಾಸ ಬೆಳಗಾವಿಯಲ್ಲಿ ಮುಗಿಯಲಿದ್ದು, ಅದುವರೆಗಿನ ಪ್ರಗತಿ ಚರ್ಚಿಸಿ, ಮುಂದಿನ‌ ಹಂತದ ಅಭಿಯಾನ ರೂಪರೇಷೆ ಅಂತಿಮಗೊಳಿಸುತ್ತೇವೆ.

ಅಭಿಯಾನದ ಮೂಲಕ ಸಂಗ್ರಹಿಸಿದ ಮಾಹಿತಿ, ದಾಖಲೆ ಹಾಗೂ ವಿವರಗಳನ್ನು ಕ್ರೋಡೀಕರಿಸಿ ಕೇಂದ್ರ ಸರ್ಕಾರ, ಜಂಟಿ ಸಂಸದೀಯ ಸಮಿತಿ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದ್ದು, ಕಾನೂನು ಹೋರಾಟದ ಬಗ್ಗೆಯೂ ಚಿಂತನೆ ನಡೆಸಿದ್ದೇವೆ ಎಂದು ಲಿಂಬಾವಳಿ, ಯತ್ನಾಳ್ ತಿಳಿಸಿದರು.

ವರಿಷ್ಠರ ಬೆಂಬಲ

ಬಿಜೆಪಿ ನೇತೃತ್ವದಲ್ಲಿ ಈ ಅಭಿಯಾನ ನಡೆಯಲಿರುವ ಕಾರಣ ವರಿಷ್ಠರ ಬೆಂಬಲವಿದ್ದು, ಪ್ರತ್ಯೇಕವಾಗಿ ಅನುಮತಿ ಪಡೆಯಬೇಕಾಗಿಲ್ಲ. ಅಹೋರಾತ್ರಿ ಧರಣಿಯಲ್ಲಿ ಕೇಂದ್ರ ಸಚಿವರು ಭಾಗವಹಿಸಿ ಬೆಂಬಲಿಸಿದ್ದರು.

ಗಂಭೀರ ಸಮಸ್ಯೆಯ ವಿರುದ್ಧ ಹೋರಾಟಕ್ಕೆ ಪಕ್ಷದ ರಾಜ್ಯಾಧ್ಯಕ್ಷರು, ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರು, ಎಲ್ಲ ಪಕ್ಷಗಳ ಸಂಸದ, ಶಾಸಕರು ಭಾಗವಹಿಸಲು ಮುಕ್ತ ಅವಕಾಶವಿದೆ ಎಂದು ಯತ್ನಾಳ್ ಹೇಳಿದರು.