ನ್ಯೂಸ್

ಅವಳು ಇಲ್ಲಿದ್ದರೆ ಖಂಡಿತ ಸಾಯುತ್ತಾಳೆ...ಮಗಳನ್ನು ಒಡಿಶಾಗೆ ಕಳುಹಿಸುವಂತೆ Mamata Banerjeeಗೆ ಮನವಿ ಮಾಡಿದ ಅತ್ಯಾಚಾರ ಸಂತ್ರಸ್ತೆಯ ತಂದೆ

Mamata Banerjee: ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ನಡೆದ ಅತ್ಯಾಚಾರ ಸಂತ್ರಸ್ತೆಯ ತಂದೆ, ತಮ್ಮ ಮಗಳಿಗೆ ಇಲ್ಲಿ ಸುರಕ್ಷತೆಯ ಅಪಾಯವಿದ್ದು, ಆದ್ದರಿಂದ ಒಡಿಶಾಗೆ ಕರೆದುಕೊಂಡು ಹೋಗಲು ಅನುಮತಿ ನೀಡಬೇಕು ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಲ್ಲಿ ಮನವಿ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಂತ್ರಸ್ತೆಯ ತಂದೆ, ಸದ್ಯ ನನ್ನ ಮಗಳು ನೋವಿನಿಂದ ಬಳಲುತ್ತಿದ್ದಾಳೆ. ಅವಳು ನಡೆಯಲು ಸಾಧ್ಯವಾಗುತ್ತಿಲ್ಲ, ಅವಳು ಇಲ್ಲಿದ್ದರೆ ಯಾವುದೇ ಕ್ಷಣದಲ್ಲಾದರೂ ಅವಳನ್ನು ಕೊಲೆ ಮಾಡುವ ಸಾಧ್ಯತೆ ಇದೆ, ಆದ್ದರಿಂದ ನಾವು ಅವಳನ್ನು ಒಡಿಶಾಗೆ ಕರೆದುಕೊಂಡು ಹೋಗುವ ನಿರ್ಧಾರಕ್ಕೆ ಬಂದಿದ್ದು, ಅವಳು ತನ್ನ ಮುಂದಿನ ಶಿಕ್ಷಣವನ್ನು ಒಡಿಶಾದಲ್ಲಿ ಮುಂದುವರಿಸುತ್ತಾಳೆ. ಮುಖ್ಯಮಂತ್ರಿ, ಡಿಜಿ, ಎಸ್ಪಿ ಮತ್ತು ಕಲೆಕ್ಟರ್ ಎಲ್ಲರೂ ನಮಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ ಮತ್ತು ನಿಯಮಿತವಾಗಿ ಆಕೆಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕೋಲ್ಕತ್ತಾದಿಂದ ಸುಮಾರು 170 ಕಿ.ಮೀ ದೂರದಲ್ಲಿರುವ ದುರ್ಗಾಪುರದ ಬಳಿಯ ಖಾಸಗಿ ವೈದ್ಯಕೀಯ ಕಾಲೇಜಿನ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಘಟನೆಯ ಸಂತ್ರಸ್ತೆ, ಒಡಿಶಾದ ಮೂಲದ ಯುವತಿ, ಶುಕ್ರವಾರ ಸಂಜೆ 8:30 ರ ಸುಮಾರಿಗೆ ಆಸ್ಪತ್ರೆ ಕಟ್ಟಡದ ಹಿಂದಿನ ಪ್ರದೇಶದಲ್ಲಿ ಪುರುಷ ಸ್ನೇಹಿತನೊಂದಿಗೆ ಕ್ಯಾಂಪಸ್‌ನಿಂದ ಹೊರಬಂದ ನಂತರ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಸ್ಥಳೀಯ ನಿವಾಸಿಗಳಾದ ಶೇಖ್ ರಿಯಾಜ್ ಉದ್ದೀನ್ (31), ಶೇಖ್ ಫಿರ್ದೌಶ್ (23) ಮತ್ತು ಅಪ್ಪು ಬೌರಿ (21) ಎಂಬ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಅವರನ್ನು ಹತ್ತು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇನ್ನಿಬ್ಬರು ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.

ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಘಟನೆಯನ್ನು ಖಂಡಿಸಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದು ಖಾಸಗಿ ಕಾಲೇಜು. ಮೂರು ವಾರಗಳ ಹಿಂದೆ ಒಡಿಶಾದ ಬೀಚ್‌ನಲ್ಲಿ ಮೂವರು ಹುಡುಗಿಯರ ಮೇಲೆ ಅತ್ಯಾಚಾರ ನಡೆದಿತ್ತು. ಒಡಿಶಾ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತಿದೆ? ಆ ಹುಡುಗಿ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಳು. ಮಧ್ಯರಾತ್ರಿ 12.30 ಕ್ಕೆ ಅವಳು ಹೇಗೆ ಹೊರಬಂದಳು? ನನಗೆ ತಿಳಿದಿರುವಂತೆ, ಈ ಘಟನೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಏನಾಯಿತು ಎಂದು ನನಗೆ ತಿಳಿದಿಲ್ಲ. ತನಿಖೆ ನಡೆಯುತ್ತಿದೆ. ಘಟನೆಯನ್ನು ಬಗ್ಗೆ ತಿಳಿದು ಆಘಾತವಾಗಿದ್ದು, ಖಾಸಗಿ ವೈದ್ಯಕೀಯ ಕಾಲೇಜುಗಳು ಸಹ ತಮ್ಮ ವಿದ್ಯಾರ್ಥಿಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಹುಡುಗಿಯರ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ಹೇಳಿದರು.(ಏಜೆನ್ಸೀಸ್​​)