ನ್ಯೂಸ್

ಆರೋಗ್ಯದ ಕಡೆ ಕಾಳಜಿ ಇರಲಿ: ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಸಲಹೆ

reportermys

ಮಂಡ್ಯ: ಇಂದಿನ ಒತ್ತಡದ ಜೀವನದ ನಡುವೆಯೂ ವಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಸಲಹೆ ನೀಡಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು(ಕಲ್ಲುಕಟ್ಟಡ) ಆವರಣದಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ಗುತ್ತಲು ಡಯಾಕೇರ್ ಡಯಾಬಿಟಿಕ್ ಹೆಲ್ತ್‌ಕೇರ್ ಸೆಂಟರ್‌ನಿಂದ ಭಾನುವಾರ ಆಯೋಜಿಸಿದ್ದ ವಾಕಥಾನ್ ಉದ್ಘಾಟಿಸಿ ವಾತನಾಡಿದರು.

ದೈಹಿಕ ಆರೋಗ್ಯಕ್ಕಾಗಿ ದೈನಂದಿನ ಚಟುವಟಿಕೆ ಅತ್ಯಗತ್ಯ. ಅನಾರೋಗ್ಯ ಬಂದರೂ ಎದುರಿಸಬಹದು. ಆದ್ದರಿಂದ ದೈಹಿಕ ಸಮತೋಲನಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಡಯಾಬಿಟಿಕ್ ತಜ್ಞ ಡಾ.ಅರುಣಾನಂದ ಅವರು ಬೆಂಗಳೂರಿನಲ್ಲಿ ಪರಿಣತಿ ಪಡೆದು ಜನಸೇವೆ ಮಾಡಲು ಮಂಡ್ಯಕ್ಕೆ ಬಂದಿದ್ದಾರೆ ಎಂದರು.

ನರರೋಗ ತಜ್ಞ ಡಾ.ಶಂಕರೇಗೌಡ ಮಾತನಾಡಿ, ಆರೋಗ್ಯದ ಬಗ್ಗೆ ಅರಿವು ಇರಬೇಕು. ಎಲ್ಲಿಯವರೆಗೆ ಆರೋಗ್ಯ ಕಾಳಜಿ ಇರುತ್ತದೋ ಅಲ್ಲಿಯವರೆಗೂ ಅನಾರೋಗ್ಯ ಕಾಡದು. ದೇಹದ ತೂಕ ಸಮತೋಲನವಾಗಿರುವಂತೆ ನೋಡಿಕೊಳ್ಳುವುದು. ದೈನಂದಿನ ಚಟುವಟಿಕೆಗಳು ಆರೋಗ್ಯಕ್ಕೆ ಪೂರಕವಾಗಿರುತ್ತವೆ. ಕ್ರೀಡೆಗಳು, ಮನರಂಜನೆ ಅವಶ್ಯಕ. ನಾವು ಓದುತ್ತಿದ್ದಾಗ ಶಾಲಾ- ಕಾಲೇಜುಗಳಲ್ಲಿ ಕ್ರೀಡಾ ಚಟುವಟಿಕೆ, ಯೋಗಾಭ್ಯಾಸಗಳು ನಡೆಯುತ್ತಿದ್ದವು. ಆದರೆ ಇಂದಿನ ದಿನಗಳಲ್ಲಿ ಎಷ್ಟೋ ಶಾಲೆಗಳಲ್ಲಿ ವ್ಯಾಯಾಮ ವಾಡಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಓದುವುದರ ಜತೆಗೆ ದೈಹಿಕ ಆರೋಗ್ಯವನ್ನು ನೋಡಿಕೊಳ್ಳಬೇಕು. ವ್ಯಾಯಾಮ, ದುಡಿಮೆ, ನಡಿಗೆ ತುಂಬ ಉಪಯುಕ್ತ, ದಿನಕ್ಕೆ ಒಂದು ಗಂಟೆ ನಡಿಗೆ ಆರೋಗ್ಯದ ರಕ್ಷಣೆಗೆ ಉತ್ತಮ. ಇವತ್ತಿನ ದಿನಗಳಲ್ಲಿ ಅತಿಯಾಗಿ ದೇಹವನ್ನು ದಂಡಿಸುವುದು ಅಪಾಯಕಾರಿ. 35 ವರ್ಷಗಳವರೆಗೆ ದೈಹಿಕ ಚಟುವಟಿಕೆ ವಾಡಿದರೆ ಯಾವುದೇ ತೊಂದರೆಯಾಗದು. 40 ವರ್ಷ ಮೇಲ್ಪಟ್ಟವರ ದೈಹಿಕ ಶ್ರಮ ಮಿತಿಯಲ್ಲಿರಬೇಕು. 60 ವರ್ಷದವರು ಡಿ ಜನರೇಷನ್ ಆಗುವುದಿಲ್ಲ. ಸೆಲ್‌ಗಳ ಉತ್ಪತ್ತಿಯಾಗುವುದಿಲ್ಲ, ವಾಕ್ ವಾಡುವುದು ಉತ್ತಮ ಎಂದು ತಿಳಿಸಿದರು.

ಡಯಾಕೇರ್ ಡಯಾಬಿಟಿಕ್ ಹೆಲ್ತ್‌ಕೇರ್ ಸೆಂಟರ್ ಮುಖ್ಯಸ್ಥ ಡಾ.ಅರುಣನಂದ, ಯೋಗಗುರು ಶಿವರುದ್ರಪ್ಪ, ಎಸ್‌ಬಿಐ ಬ್ಯಾಂಕ್‌ನ ಇಂದ್ರೇಶ್ ಇತರರಿದ್ದರು. ಕಾಲೇಜಿನ ಆವರಣದಲ್ಲಿ ಆರೋಗ್ಯವನ್ನು ಉಚಿತವಾಗಿ ತಪಾಸಣೆ ಮಾಡಲಾಯಿತು. ನಂತರ ಮೈಸೂರು-ಬೆಂಗಳೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ವಾಕಥಾನ್ ನಡೆಯಿತು.