ನ್ಯೂಸ್

ಸ್ವಂತ ಊರಿಗೆ ತೆರಳಲು ಕಾರ್ಮಿಕರಿಗೆ ಅನುಮತಿ: ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೆಎಸ್​ಆರ್​ಟಿಸಿ ಬಸ್​ ವ್ಯವಸ್ಥೆ

kumarvrl

ಬೆಂಗಳೂರು: ಲಾಕ್​ಡೌನ್​ನಿಂದ ಪರಿತಪಿಸುತ್ತಿದ್ದ ಕೂಲಿ ಕಾರ್ಮಿಕರಿಗೆ ಸ್ವಂತ ಊರುಗಳಿಗೆ ತೆರಳಲು ಸರ್ಕಾರ ಅನುಮತಿ ನೀಡಿದೆ.

ವಲಸೆ ಹಾಗೂ ಕೂಲಿ ಕಾರ್ಮಿಕರನ್ನು ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಸ್ವಂತ ಊರಿಗೆ ಕಳುಹಿಸಲು ವ್ಯವಸ್ಥೆ ಕಲ್ಪಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್​ ಆದೇಶ ಹೊರಡಿಸಿದ್ದಾರೆ.

ಕೇಂದ್ರ ಸರ್ಕಾರ ಏ.20ರಂದು ಹೊರಡಿಸಿದ ಆದೇಶದಲ್ಲಿ ರಾಜ್ಯದೊಳಗೆ ಕಾರ್ಮಿಕರನ್ನು ಸ್ಥಳಾಂತರಿಸಲು ಅವಕಾಶ ಕಲ್ಪಿಸಿದೆ. ಹೀಗಾಗಿ ರಾಜ್ಯದಲ್ಲಿರುವ ಗ್ರಾಮಗಳಿಗೆ ಕಾರ್ಮಿಕರು ತೆರಳಬಹುದಾಗಿದೆ. ಆದರೆ ಅಂತಾರಾಜ್ಯಗಳಿಗೆ ತೆರಳಲು ಅವಕಾಶ ಇಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಶೇ.40ರ ಅನುಪಾತದಲ್ಲಿ ಕಾರ್ಮಿಕರನ್ನು ಸ್ಥಳಾಂತರಿಸಬೇಕು. ಕಾರ್ಮಿಕರಿಗೆ ಸ್ಯಾನಿಟೈಸರ್​, ಮಾಸ್ಕ್​ ವಿತರಿಸಬೇಕು. ಎಲ್ಲ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ವಲಸೆ ಹಾಗೂ ಕೂಲಿ ಕಾರ್ಮಿಕರು ತಮ್ಮ ಊರುಗಳಲ್ಲಿ ಕೃಷಿ ಚಟುವಟಿಕೆ ಹಾಗೂ ಇತರ ಕೆಲಸ ಮಾಡಲು ನಿರ್ಧರಿಸಿರುವುದರಿಂದ ಅವರನ್ನು ಕಳುಹಿಸಿಕೊಡಲು ಕೇಂದ್ರ ಸರ್ಕಾರ ಆದೇಶಕ್ಕೆ ತಿದ್ದುಪಡಿ ಮಾಡಿದೆ.