ಧಾರವಾಡ: ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆಯ ಕಾವಿನ ನಡುವೆ ಬಿಸಿಲಿನ ಕಾವು ಹೆಚ್ಚಿದೆ. ಇದೀಗ ಬಿಸಿಲಿನ ತಾಪಕ್ಕೆ ಜಿಲ್ಲೆಯಲ್ಲಿ ಕೆಲ ಮತ ಯಂತ್ರಗಳು ಕೆಟ್ಟು ಹೋಗಿರುವ ಘಟನೆ ನಡೆದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾಹಿತಿ ನೀಡಿದ್ದು, ಕೆಲವು ಕೇಂದ್ರಗಳಲ್ಲಿ ಮತಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಹೀಗಾಗಿ ಜಿಲ್ಲೆಯಲ್ಲಿ 34 ವಿವಿ ಪ್ಯಾಟ್ ಯಂತ್ರಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಧಾರವಾಡ ವನಿತಾ ಶಾಲೆಯ ಮತದಾನ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೆಟ್ಟು ಹೋಗಿರುವ ಮತಯಂತ್ರಗಳನ್ನು ಪಕ್ಷದ ಸ್ಥಳೀಯ ಏಜೆಂಟ್ಗಳ ಸಮ್ಮುಖದಲ್ಲಿ ಬದಲಾವಣೆ ಮಾಡಲಾಗಿದೆ. ಅಲ್ಲದೆ ಎರಡು ಕಂಟ್ರೋಲ್ ಯುನಿಟ್ಗಳ ಮಾಕ್ಪೋಲ್ ಬದಲಾವಣೆ ಮಾಡಲಾಗಿದೆ ಎಂದು ಹೇಳಿದರು.
ಮತದಾರ ಪಟ್ಟಿಯಿಂದ ಹೆಸರು ಕೈ ಬಿಟ್ಟ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಕೂಡ ದೂರು ಬಂದಿದೆ. ಕಳೆದ 6 ತಿಂಗಳಲ್ಲಿ 40 ಸಾವಿರ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಕೆಲವೊಬ್ಬರು ಮತದಾರರ ಪಟ್ಟಿಯನ್ನು ಸರಿಯಾಗಿ ಪರಿಶೀಲಿಸಿಲ್ಲ. ಕೆಲವೊಬ್ಬರ ಮತ ಬೇರೆ ಕಡೆ ಇರುವುದರಿಂದ ಪಟ್ಟಿಯಿಂದ ಕೈ ಹೆಸರು ಬಿಡಲಾಗಿದೆ. ಹೀಗಾಗಿ ಅವರಿಗೆ ಮತ ಹಾಕಲು ಅವಕಾಶ ಇಲ್ಲ. ಫಾರ್ಮ್ ಸಿಕ್ಸ್ಗೆ ಅರ್ಜಿ ಸಲ್ಲಿಸಿದರೆ ಹೆಸರು ಸೇರಿಸಲಾಗುವುದು ಎಂದರು.