ನ್ಯೂಸ್

ಪ್ರಾಮಾಣಿಕತೆ ಮೆರೆದ ವಿಆರ್​ಎಲ್ ಟ್ರಾವಲ್ಸ್ ಸಿಬ್ಬಂದಿ

ಹುಬ್ಬಳ್ಳಿ: ಎರಡೂವರೆ ದಶಕಗಳಿಂದ ಪ್ರಯಾಣಿಕರ ಸಾರಿಗೆ ಸೇವೆಯಲ್ಲಿ ಮುಂಚೂಣಿಯಲ್ಲಿರುವ ನಾಡಿನ ಪ್ರತಿಷ್ಠಿತ ವಿಜಯಾನಂದ ಟ್ರಾವಲ್ಸ್​ನ ಚಾಲಕರು, ಪ್ರಯಾಣಿಕರೊಬ್ಬರು ಬಸ್ ಇಳಿಯುವಾಗ ಮರೆತುಹೋಗಿದ್ದ ನಗದು ಹಾಗೂ ಲ್ಯಾಪ್​ಟಾಪ್ ಕಂಪ್ಯೂಟರ್ ಇದ್ದ ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಕೃಷ್ಣ ಧನ್ವಂತ್ರಿ ಎಂಬ ಪ್ರಯಾಣಿಕ ಬೆಳಗಾವಿಯಿಂದ ಬರೋಡಾಕ್ಕೆ ಪ್ರಯಾಣಿಸಿದ್ದರು. ಬರೋಡಾದಲ್ಲಿ ಇಳಿಯುವಾಗ ಬ್ಯಾಗ್ ಮರೆತು ಹೋಗಿದ್ದರು. ಈ ಬ್ಯಾಗಿನಲ್ಲಿ 55 ಸಾವಿರ ನಗದು ಹಾಗೂ ಬೆಲೆ ಬಾಳುವ ಲ್ಯಾಪ್​ಟಾಪ್ ಇತ್ತು.

ಇದನ್ನು ಗಮನಿಸಿದ ಬಸ್ ಚಾಲಕರಾದ ಐ.ಎಂ. ಫಣಿಬಂದ ಹಾಗೂ ಉಮೇಶ ಸಂಕಪಾಲ ತಕ್ಷಣ ಸಂಸ್ಥೆಯ ಪ್ರಧಾನ ಕಚೇರಿಯನ್ನು ಸಂರ್ಪಸಿ ವಿಷಯ ತಿಳಿಸಿದರು. ಬಳಿಕ, ಹಣ ಮತ್ತು ಲ್ಯಾಪ್​ಟಾಪ್ ಹೊಂದಿದ್ದ ಬ್ಯಾಗನ್ನು ಅದರ ಮಾಲೀಕರಿಗೆ ಸುರಕ್ಷಿತವಾಗಿ ಮರಳಿಸಲಾಗಿದೆ.

ವಿಆರ್​ಎಲ್ ಟ್ರಾವಲ್ಸ್ ಬಸ್ ಚಾಲಕರ ಪ್ರಾಮಾಣಿಕತೆಯನ್ನು ಕೊಂಡಾಡಿರುವ ಪ್ರಯಾಣಿಕ ಕೃಷ್ಣ ಧನ್ವಂತ್ರಿ ಈ ಚಾಲಕರಿಗೆ ಮತ್ತು ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸಿದ್ದು, ಫೇಸ್​ಬುಕ್​ನಲ್ಲಿ ಪೋಸ್ಟ್ ಸಹ ಹಾಕಿದ್ದಾರೆ.

ವಿಆರ್​ಎಲ್ ಸಂಸ್ಥೆಯ ಬಸ್​ಗಳಲ್ಲಿ ಪ್ರಯಾಣಿಸುವವರು ಮರೆತು ಹೋಗಿದ್ದ ಅನೇಕ ಬೆಲೆ ಬಾಳುವ ವಸ್ತುಗಳನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಉದಾಹರಣೆಗಳು ಈ ಹಿಂದೆಯೂ ಸಾಕಷ್ಟು ಬಾರಿ ನಡೆದಿವೆ ಎಂದು ಸಂಸ್ಥೆಯ ಉಪಾಧ್ಯಕ್ಷ ಪ್ರಭು ಸಾಲಗೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಬ್ಬಂದಿಗೆ ನಗದು ಬಹುಮಾನ

ಪ್ರಯಾಣಿಕರ ಸ್ವತ್ತುಗಳ ಬಗ್ಗೆ ಕಾಳಜಿ ವಹಿಸುವುದನ್ನು, ಪ್ರಾಮಾಣಿಕ ಸೇವಾ ಮನೋಭಾವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಬ್ಬರೂ ಚಾಲಕರಿಗೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್  ಡಾ. ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ನಗದು ಬಹುಮಾನ ಘೊಷಿಸಿದ್ದಾರೆ.

ನಾನು ಜಾಸ್ತಿ ಲಗೇಜ್ ತೆಗೆದುಕೊಂಡು ಬಂದಿದ್ದೆ. ಬಸ್ ಇಳಿಯುವಾಗ ಕ್ಯಾಷ್​ಬ್ಯಾಗ್ ಮತ್ತು ಲ್ಯಾಪ್​ಟಾಪ್ ಬಿಟ್ಟಿರುವುದು ನಂತರ ಗಮನಕ್ಕೆ ಬಂದಿತು. ಆತಂಕಗೊಂಡು, ಕೂಡಲೇ ವಿಆರ್​ಎಲ್ ಕಚೇರಿಯಿಂದ ಚಾಲಕರ ಮೊಬೈಲ್ ಪೋನ್ ನಂಬರ್ ಪಡೆದುಕೊಂಡು ಕರೆ ಮಾಡಿದಾಗ, ಬ್ಯಾಗ್ ಅನ್ನು ಸಂಸ್ಥೆಯ ಅಹಮದಾಬಾದ್ ಕಚೇರಿಗೆ ತಲುಪಿಸುತ್ತಿರುವುದಾಗಿ ತಿಳಿಸಿದರು. ಅತ್ಯಂತ ಪ್ರಾಮಾಣಿಕವಾಗಿ ನನ್ನ ವಸ್ತುಗಳನ್ನು ಮರಳಿಸಿದ್ದಾರೆ. ಇಂಥ ಚಾಲಕರನ್ನು ಹೊಂದಿರುವ ಕನ್ನಡಿಗರ ಹೆಮ್ಮೆಯ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಎಂ.ಡಿ. ಆನಂದ ಸಂಕೇಶ್ವರ ಅವರಿಗೆ ಅಭಿನಂದನೆಗಳು. | ಕೃಷ್ಣ ಧನ್ವಂತರಿ ಪ್ರಯಾಣಿಕ