ಸೊರಬ: ಕಂದಾಯ ಇಲಾಖೆಯ ಅಸಮರ್ಪಕ ನೀತಿ, ನಿಯಮಾವಳಿಯಿಂದಾಗಿ ಗ್ರಾಮ ಭೂಮಿಗಳು ಉಳ್ಳವರ ಪಾಲಾಗುತ್ತಿದೆ. ಭೂರಹಿತರು ಭೂಮಿ ವಂಚಿತರಾಗಿಯೆ ಉಳಿಯುವಂತಾಗಿದೆ ಎಂದು ಚಂದ್ರಗುತ್ತಿ ಹೋಬಳಿ ಹೊಳೆಮರೂರು ಗ್ರಾಮಸ್ಥರು ಆರೋಪಿಸಿದರು.
ಶುಕ್ರವಾರ ತಾಲೂಕಿನ ಚಂದ್ರಗುತ್ತಿ ಗ್ರಾಮದ ಹೊಳೆಮರೂರು ಗ್ರಾಮದಲ್ಲಿ ವೃಕ್ಷಲಕ್ಷ ಆಂದೋಲನ, ಜೀವವೈವಿಧ್ಯ ಮಂಡಳಿ, ಜೀವವೈವಿಧ್ಯ ನಿರ್ವಹಣಾ ಸಮಿತಿ, ಪರಿಸರ ಜಾಗೃತಿ ಟ್ರಸ್ಟ್ ಯಿಂದ ವಿಶ್ವಜೀವ ವೈವಿಧ್ಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾದಲ್ಲಿ ಅವರು ಮಾತನಾಡಿದರು. ಈ ಹಿಂದೆ ಸ.ನಂ. 102 ಸಾಮಾಜಿಕ ಅರಣ್ಯವನ್ನು ತಹಸೀಲ್ದಾರ್ ನಾಲ್ಕು ಜನರಿಗೆ ಮಂಜೂರು ಮಾಡಿದ್ದರು. ಮಂಜೂರಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ರದ್ದಾಗಿತ್ತು. ಕೃಷಿ ಚಟುವಟಿಕೆಯೂ ಇರಲಿಲ್ಲ. ಈಗ ಮತ್ತೆ ಆ ನಾಲ್ಕು ಮಂದಿ ಹಂತಹಂತವಾಗಿ ಅಲ್ಲಿನ ಅರಣ್ಯ ನಾಶಕ್ಕೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.
ಕೆಲ ದಿನಗಳ ಹಿಂದೆ ಇಲ್ಲಿನ ಸ.ನಂ. 121, 132 ಕಂದಾಯ ಜಾಗದಲ್ಲಿದ್ದ ಅಪಾರ ವೃಕ್ಷಗಳನ್ನು ನಾಶಪಡಿಸಲಾಗಿತ್ತು. ದೂರು, ಆಕ್ಷೇಪ ಸಲ್ಲಿಕೆ ನಂತರ ಗ್ರಾಮಕ್ಕೆ ಅರಣ್ಯ ಪ್ರದೇಶ ಉಳಿದುಕೊಂಡಿದೆ. ಗ್ರಾಮದ ನೈಸರ್ಗಿಕ ಸಂಪತ್ತು ಯಾವುದೇ ಕಾರಣಕ್ಕೂ ನಾಶವಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಜೀವವೈವಿಧ್ಯ ಮಂಡಳಿಯ ಅಧಿಕಾರಿ ಪ್ರಸನ್ನ ಜೀವವೈವಿಧ್ಯ ಕಾಯ್ದೆ ಬಗ್ಗೆ ವಿವರಿಸಿ ಗ್ರಾಮ ಅರಣ್ಯ, ಕೆರೆ, ನದಿ, ಮುಂತಾದ ನಿಸರ್ಗ ಸಂಪನ್ಮೂಲಗಳನ್ನು ಗ್ರಾಮ ಪಂಚಾಯಿತಿ ಮೂಲಕ ಕಾಯ್ದುಕೊಳ್ಳಲು ಅಧಿಕಾರವಿದೆ. ಕಾಯ್ದೆ ಪಾಲನೆಯಾಗಬೇಕು ಎಂದು ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರು.
ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶಿಸರ, ಪಜಾಟ್ರಸ್ಟ್ ಅಧ್ಯಕ್ಷ ಎಂ.ಆರ್. ಪಾಟೀಲ್, ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಪ್ರಧಾನ ಕಾರ್ಯದರ್ಶಿ ಸಿ.ಪಿ.ವೀರೇಶಗೌಡ, ಜೀವವೈವಿಧ್ಯ ಮಂಡಳಿ ಅಧಿಕಾರಿ ಕುಮಾರ್, ಪವಿತ್ರಾ, ತಾಪಂ ಇಒ ರವೀಂದ್ರ, ಆರ್‌ಎ್ಒ ಜಾವೀದ್ ಬಾಷಾ ಅಂಗಡಿ, ಸಂಜಯ್, ಅರಣ್ಯ ರಕ್ಷಕ ಮೌನೇಶ್, ಪಿಡಿಒ ನಾರಾಯಣ್, ತಾಪಂನ ಸುಬ್ಬುರಾಜ್, ಗ್ರಾಮದ ಗಂಗಾಧರ್ ಗೌಡ, ಚಂದ್ರಶೇಖರ್ ಗೌಡ, ಜೈರಾಮ, ಮಲ್ಲಿಕಾರ್ಜುನ, ವೀರೇಂದ್ರಗೌಡ, ಏ.ಕೆ ಗಂಗಾಧರ, ಆದರ್ಶಗೌಡ, ವಿನಾಯಕ, ನೀಲಕಂಠಗೌಡ, ಕುಮಾರ್‌ಗೌಡ, ಶಶಾಂಕ, ಪ್ರಮೋದ್‌ಗೌಡ, ವಿರೇಶ, ಮಂಜುನಾಥ ಶೇಟ್ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.