ನ್ಯೂಸ್

ಕಾಂಗ್ರೆಸ್‌ನ ಜನ ವಿರೋಧಿ ಆಡಳಿತ ಕೊನೆಗಾಣಿಸಲು ಶಪಥ: ವಿಜಯೇಂದ್ರ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಬಹುಸಂಖ್ಯಾತ ಜನರ ವಿರೋಧಿ ಆಡಳಿತ ಕೊನೆಗಾಣಿಸಲು ಶಪಥ ಮಾಡೋಣವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ನೀಡಿ, ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಸುದೀರ್ಘ ಬಹಿರಂಗ ಪತ್ರ ಬರೆದು ಆತ್ಮಸ್ಥೈರ್ಯ ತುಂಬಿದ್ದಾರೆ.

ಬಿಜೆಪಿ ಎರಡು, ಮಿತ್ರಪಕ್ಷ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಸೋತಿರುವ ಕಾರಣ ಎದೆಗುಂದಬೇಕಾಗಿಲ್ಲ. ಈ ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಮುಂದಿರುವ ಸವಾಲುಗಳನ್ನು ಎದುರಿಸಲು ಎಚ್ಚರಿಕೆ ಸಂಕೇತವಾಗಿದೆ ಎಂದು ಭಾವಿಸೋಣವೆಂದು ವಿಜಯೇಂದ್ರ ಕೇಳಿಕೊಂಡಿದ್ದಾರೆ.

ಕಾಂಗ್ರೆಸ್‌ನ ಅಧಿಕಾರ ದುರುಪಯೋಗ, ಆಮಿಷಗಳು ಮತದಾರರನ್ನು ದಿಕ್ಕುತಪ್ಪಿಸುವ ನಿಟ್ಟಿನಲ್ಲಿ ಪರಿಣಾಮಬೀರಿವೆ. ಈ ಲಿತಾಂಶ ಸಂಘಟನೆಯ ಸಾಮರ್ಥ್ಯ ಹಾಗೂ ಪ್ರಭಾವವನ್ನು ಬಿಂಬಿಸುವ ಅಳತೆಗೋಲಲ್ಲ. ಅಪಜಯವನ್ನು ಹಿನ್ನಡೆ ಎಂದು ಪರಿಗಣಿಸುವ ಪ್ರಶ್ನೆಯೇ ಉದ್ಭವಿಸದು ಎಂದು ಹುರುಪು ತುಂಬಿದ್ದಾರೆ.

ಭಿನ್ನರ ಗುಂಪಿಗೆ ಪರೋಕ್ಷ ಎಚ್ಚರಿಕೆ

ಪಕ್ಷದಲ್ಲಿ ಅಭಿಪ್ರಾಯ ಬೇಧಗಳಿಗೆ ಮುಕ್ತ ಅವಕಾಶವಿದ್ದೇ ಇದೆ. ಅದೇ ರೀತಿಯಲ್ಲಿ ಶಿಸ್ತು, ಸಂಯಮ ಎಲ್ಲೆ ಮೀರದಂತೆ ನೋಡಿಕೊಳ್ಳುವ ವ್ಯವಸ್ಥೆಯೂ ನಮ್ಮಲ್ಲಿದೆ ಎಂದು ಭಿನ್ನಮತೀಯ ಗುಂಪಿಗೆ ಬಿ.ವೈ.ವಿಜಯೇಂದ್ರ ಪರೋಕ್ಷವಾಗಿ ಎಚ್ಚರಿಸಿದ್ದಾರೆ.

ಪ್ರತಿಯೊಬ್ಬ ಕಾರ್ಯಕರ್ತರು, ಪ್ರಮುಖರು ಹಾಗೂ ಹಿರಿಯರೊಂದಿಗೆ ವಿಶ್ವಾಸ, ಪ್ರೀತಿಯನ್ನು ಬೆಳೆಸಿಕೊಂಡು ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎನ್ನುವ ಸಂಕಲ್ಪ ನನ್ನದಾಗಿದೆ ಎಂದು ತಿಳಿಸಿ, ಸಂಘಟನೆ ಬಲವೃದ್ಧಿಗೆ ಇನ್ನಷ್ಟು ಕ್ರಿಯಾಶೀಲರಾಗಬೇಕು ಎಂದು ಕಾರ್ಯಕರ್ತರಿಗೆ ಕೋರಿದ್ದಾರೆ.