ನ್ಯೂಸ್

ಕಣಿವೆ ರಾಜ್ಯದಲ್ಲಿ ಅಂತಿಮ ಹಂತದ ಮತದಾನ ಆರಂಭ; ಇಬ್ಬರು ಮಾಜಿ DCM ಸೇರಿದಂತೆ ಘಟಾನುಘಟಿಗಳು ಕಣದಲ್ಲಿ

ಶ್ರೀನಗರ: 90 ಸಂಖ್ಯಾಬಲದ ಜಮ್ಮು-ಕಾಶ್ಮೀರ (Jammu Kashmir) ವಿಧಾನಸಭೆಗೆ ಇಂದು (ಅಕ್ಟೋಬರ್​ 01) ಅಂತಿಮ ಹಂತದ ಮತದಾನ ನಡೆಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಮಂಗಳವಾರ (ಅಕ್ಟೋಬರ್​ 01) ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಜಮ್ಮು ವಿಭಾಗದ 24 ಕ್ಷೇತ್ರಗಳು ಮತ್ತು ಕಾಶ್ಮೀರದ 16 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಮಾಜಿ ಉಪಮುಖ್ಯಮಂತ್ರಿಗಳಾದ ಕಾಂಗ್ರೆಸ್‌ನ ತಾರಾ ಚಂದ್ ಮತ್ತು ಮುಜಾಫರ್ ಹುಸೇನ್ ಬೇಗ್ ಸೇರಿದಂತೆ 415 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಜನರು ಹೊರಗೆ ಬಂದು ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ. ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷವು ಸಮಸ್ಯೆಗಳನ್ನು ಪರಿಹರಿಸಬೇಕು. ನಾನು ಯಾವುದೇ ಪಕ್ಷದ ವಿರುದ್ಧ ಅಥವಾ ಪರವಾಗಿ ಮಾತನಾಡುವುದಿಲ್ಲ. ಮತದಾರರು ಬಹುಮತವನ್ನು ಒಂದೇ ಪಕ್ಷಕ್ಕೆ ನೀಡಬೇಕೇ ಅಥವಾ ಅಥವಾ ಎಂಬುದನ್ನು ನಿರ್ಧರಿಸುತ್ತಾರೆ ಎಂದು ಗುಲಾಂ ನಬಿ ಅಜಾದ್​ ಮತದಾನದ ಬಳಿಕ ಹೇಳಿದ್ದಾರೆ.

ಏಳು ಜಿಲ್ಲೆಗಳಲ್ಲಿ 40 ಕ್ಷೇತ್ರಗಳಲ್ಲಿ 39.18 ಲಕ್ಷಕ್ಕೂ ಅಧಿಕ ಜನರು ಮತ ಚಲಾಯಿಸಲಿದ್ದು, ಚುನಾವಣೆ ನಡೆಯುವ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ. ಅರೆಸೇನೆ ಮತ್ತು ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಆನಂದ್ ಜೈನ್‌ ತಿಳಿಸಿದ್ದಾರೆ.