SIR 
ನ್ಯೂಸ್

ಮತದಾರರ ಪಟ್ಟಿ ಅಕ್ರಮ, ಬೂತ್ ಏಜೆಂಟರ್ ವಿರುದ್ಧ FIR | SIR

ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ವೇಳೆ 778 ಜನರನ್ನು ಮತದಾರರ ಪಟ್ಟಿಯಿಂದ ಅಳಿಸಲು ಯತ್ನಿಸಿದ ಆರೋಪ ಕೇಳಿ ಬಂದ್ದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್ ನೀಡಿದ ದೂರಿನ ಮೇರೆಗೆ ಬೂತ್ ಏಜೆಂಟರ್ ಜಿ.ಎಸ್. ವಸಂತಲಕ್ಷ್ಮೀ ಹಾಗೂ ಇತರರ ವಿರುದ್ಧ ವಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.

ಕ್ಷೇತ್ರದಲ್ಲಿ ವಾಸವಿರುವ ಕಾನೂನುಬದ್ಧ ಮತದಾರರು ಗೈರುಹಾಜರಾಗಿದ್ದಾರೆ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಬಿಂಬಿಸಲು ನಮೂನೆ-7 ಅನ್ನು ಬಳಸಿ ಸುಳ್ಳು ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ವಾರ್ಡ್ ನಂ. 64ರ ವಿವಿಧ ಮತಗಟ್ಟೆಗಳಲ್ಲಿ (ಮತಗಟ್ಟೆ 153, 154, 155, 156, 157, 158, 203 ಮತ್ತು 205) ಒಟ್ಟು 778ಕ್ಕೂ ಹೆಚ್ಚು ನಕಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ಒಡನಾಟ ಹೊಂದಿರುವ ವ್ಯಕ್ತಿಗಳು ನಿರ್ದಿಷ್ಟ ಸಮುದಾಯದ ಮತದಾರರನ್ನು ಗುರಿಯಾಗಿಸಿ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನಕಲಿ ಸಹಿ, ಒಳ ಸಂಚು ಶಂಕೆ:

ಬಿಜೆಪಿಯ ಬೂತ್ ಮಟ್ಟದ ಏಜೆಂಟ್ ಎಂದು ಹೇಳಿಕೊಳ್ಳುವ ಜಿ.ಎಸ್. ವಸಂತಲಕ್ಷ್ಮೀ ಅವರ ಹೆಸರಿನಲ್ಲಿ ಸುಳ್ಳು ಅರ್ಜಿಗಳನ್ನು ಸಲ್ಲಿಸಲಾಗಿದೆ. ಆದರೆ, ಸಲ್ಲಿಸಲಾದ ನಮೂನೆಗಳಲ್ಲಿರುವ ಸಹಿಗಳು ಪರಸ್ಪರ ಭಿನ್ನವಾಗಿದ್ದು, ಫೋರ್ಜರಿ (ನಕಲಿ ಸಹಿ) ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಮತದಾರರನ್ನು ವಂಚಿಸುವ ದುರುದ್ದೇಶದಿಂದ ಈ ಒಳಸಂಚು ರೂಪಿಸಲಾಗಿದೆ ಎಂದು ಅನೂಪ್ ದೂರಿದ್ದಾರೆ.