ನ್ಯೂಸ್

2024ರಲ್ಲಿ ದೇಶದಲ್ಲೇ ಅತಿ ಹೆಚ್ಚು ಮತಗಳ್ಳತನ ಆಂಧ್ರದಲ್ಲಿ ನಡೆದಿದೆ: ಮಾಜಿ CM ಜಗನ್​ ಅರೋಪ!

ದೇಶದಲ್ಲಿಯೇ ಅತಿ ಹೆಚ್ಚು ಮತಗಳ್ಳತನ 2024ರ ಆಂಧ್ರಪ್ರದೇಶದ ಚುನಾವಣೆಯಲ್ಲಿ ನಡೆದಿದೆ ಎಂದು ವೈಎಸ್​ಆರ್​ಪಿ ಮುಖ್ಯಸ್ಥ ಹಾಗೂ ಮಾಜಿ CM ಜಗನ್​ ಮೋಹನ್​ ರೆಡ್ಡಿ ಆರೋಪಿಸಿದ್ದಾರೆ.

ಆಂಧ್ರದ ತಾಡೆಪಲ್ಲಿಯಲ್ಲಿ ವೈಎಸ್​​ಆರ್​ಪಿ ಪ್ರಧಾನ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇಶದಲ್ಲಿ ಅತ್ಯಧಿಕ ಆಕ್ರಮ ಚುನಾವಣೆ ಆಂಧ್ರದಲ್ಲಿ ನಡೆದಿದೆ. ಆದರೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್​​ ಗಾಂಧಿ ಇರದ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಕಳೆದ ವರ್ಷ ವಿಧಾನಸಭಾ ಚುನಾವಣೆಗೂ ಮುನ್ನ ಮತ್ತು ನಂತರ ಫಲಿತಾಂಶ ಪ್ರಕಟವಾದ ಬಳಿಕ ಶೆ.12.5ರಷ್ಟು ವ್ಯತ್ಯಾಸ ಇತ್ತು. ಅಂದರೆ, ಒಟ್ಟು 48 ಲಕ್ಷ ಮತಗಳಲ್ಲಿ ಶೆ.12.5ರಷ್ಟು ಮತಗಳು ಚುನಾವಣೆಯಲ್ಲಿ ಕಳುವಾಗಿವೆ ಎಂದು ಆರೋಪಿಸಿದ್ದಾರೆ.

ಆಂಧ್ರದಲ್ಲಿ ಇಷ್ಟೊಂದು ಬೃಹತ್​ ಆಕ್ರಮ ನಡೆದಿದ್ದರೂ, ರಾಹುಲ್​​ ಗಾಂಧಿ ಮಾತ್ರ ತುಟಿ ಬಿಚ್ಚುತ್ತಿಲ್ಲ. ಅದಕ್ಕೆ ಕಾರಣವೂ ಇದೆ. ಕಾಂಗ್ರೆಸ್​​ ನೇತೃತ್ವದ ತೆಲಂಗಾಣ ಸಿಎಂ ರೇವಂತ್​ ರೆಡ್ಡಿ ಮೂಲಕ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರೊಂದಿಗೆ ರಾಹುಲ್​​ ಗಾಂಧಿ ಉತ್ತಮ ಸಂಪರ್ಕದಲ್ಲಿದ್ದಾರೆ. ಹೀಗಾಗಿ, ಅವರು ಮಾತನಾಡುತ್ತಿಲ್ಲ ಎಂದರು.

ಮತಗಟ್ಟೆ ಅಕ್ರಮದ ಬಗ್ಗೆ ನಾವು ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದೇವೆ. ವಿಶೇಷವಾಗಿ ಓಂಗೋಲ್ ಮತದಾನದ ವಿಷಯದಲ್ಲಿ ನಾವು ಕಾನೂನು ಹೋರಾಟ ನಡೆಸಿದ್ದೇವೆ ಎಂದು ಜಗನ್ ನೆನಪಿಸಿದರು.

ಅಲ್ಲದೆ.. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ 2013 ರಿಂದ ಸತತ ಮೂರು ಬಾರಿ ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಗೆದ್ದಿದ್ದಾರೆ ಮತ್ತು ನಾಲ್ಕನೇ ಬಾರಿಗೆ ಅದೇ ಸ್ಥಾನದಿಂದ ಸ್ಪರ್ಧಿಸಿ ಸೋತಿದ್ದಾರೆ. ಸೋತ ಅರವಿಂದ್ ಕೇಜ್ರಿವಾಲ್ ಬಗ್ಗೆ ನೀವು ಏಕೆ ಮಾತನಾಡುತ್ತಿಲ್ಲ? ವೈ.ಎಸ್. ಜಗನ್ ರಾಹುಲ್ ಗಾಂಧಿಯನ್ನು ಪ್ರಶ್ನಿಸಿದರು.(ಏಜೆನ್ಸೀಸ್​)