ಮಹದೇವಪುರ : ಮತಗಳ್ಳತನದ ಮೂಲ ಮಹದೇವಪುರ ಕ್ಷೇತ್ರವಾಗಿದ್ದು, 2013 ರಲ್ಲೆ ಮತಗಳ್ಳತನದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು ಎಂದು ಶಾಸಕ ಎ.ಸಿ.ಶ್ರೀನಿವಾಸ್ ತಿಳಿಸಿದರು.
ಕ್ಷೇತ್ರದ ಹೂಡಿ ಬ್ಲಾಕ್ ವತಿಯಿಂದ ಬ್ಲಾಕ್ ಅಧ್ಯಕ್ಷ ಮಾಯಂಕ್ ಬಾಬು ನೇತೃತ್ವದಲ್ಲಿ ಕಾಡುಗೋಡಿಯ ಮೆಟ್ರೋ ನಿಲ್ದಾಣದ ಬಳಿ ಏರ್ಪಡಿಸಿದ್ದ ಮತ ಕಳ್ಳತನದ ವಿರುದ್ಧ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಳ್ಳತನದ ಮತಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಬಿಜೆಪಿ ಪಕ್ಷದವರು ಕುತಂತ್ರದಿಂದ ಗೆಲುವಿನ ಹಳಿಗೆ ಸಾಗುತ್ತಿದ್ದಾರೆ. ಪ್ರತಿ ಚುನಾವಣೆಯಲ್ಲಿ ಮತಗಳ್ಳತನ ಮೂಲಕ ಮೋಸದಿಂದ ಚುನಾವಣೆಯಲ್ಲಿ ಗೆದ್ದು ಅಕ್ರಮವಾಗಿ ಅಧಿಕಾರಕ್ಕೆ ಬಂದು ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಬೂತ್, ವಾರ್ಡ್‌ಗಳಲ್ಲಿ ಮತಗಳ್ಳತನದ ಬಗ್ಗೆ ಎಚ್ಚರವಹಿಸಬೇಕು ಕ್ಷೇತ್ರದಲ್ಲಿ 60 ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹ ಮಾಡಿ ಅಭಿಯಾನ ಮಾಡುವ ಮೂಲಕ ಮುಂದೆ ಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಯಿಂದಲೆ ಮತಗಳ್ಳತನಕ್ಕೆ ಕಡಿವಾಣ ಹಾಕಬೇಕು ಎಂದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಲಿಖಾನ್ ಮಾತನಾಡಿ, ದೇಶ ವ್ಯಾಪಿ ಬೂತ್ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದಲ್ಲಿ ಮತಗಳ್ಳತನ ವಿರೋಧಿಸಿ ಹೋರಾಟ ಮಾಡುತ್ತಿದ್ದೇವೆ. ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶದಲ್ಲಿ ಭಾರತ್ ಜೋಡೋ ಮಾದರಿಯಲ್ಲಿ ಮತಗಳ್ಳತನ ಮಾಡುತ್ತಿರುವ ಎನ್‌ಡಿಎ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಿದೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ನಾಗೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಲ್ಲೂರಹಳ್ಳಿ ನಾಗೇಶ್, ಹೂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಾಂಕ್ ಬಾಬು, ಬೆಂಗಳೂರು ಪೂರ್ವ ಜಿಲ್ಲಾ ಓಬಿಸಿ ಅಧ್ಯಕ್ಷ ಕುಪ್ಪಿ ಮಂಜುನಾಥ, ಭೂ ನ್ಯಾಯಮಂಡಳಿ ಸದಸ್ಯ ಬಿ.ವಿ. ವರುಣ್, ಪ್ರಶಾಂತ್, ಕ್ಷೇತ್ರದ ಅಧ್ಯಕ್ಷ ಸುರೇಶ್, ಬ್ಲಾಕ್ ಅಧ್ಯಕ್ಷ ನಾರಾಯಣಸ್ವಾಮಿ ಉಪಸ್ಥಿತರಿದ್ದರು.