ಬೆಂಗಳೂರು: ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನ್‌ಗೆ ಮತ ಚಲಾಯಿಸುವಂತೆ ಬೆಂಗಳೂರಿನಲ್ಲಿ ವಾಸಿಸುವ ಬಿಹಾರದ ಜನರಲ್ಲಿ ಮನವಿ ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(DK Shivakumar), ತೇಜಸ್ವಿ ಯಾದವ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮತ್ತು ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಲು ಕೈಜೋಡಿಸುವಂತೆ ಒತ್ತಾಯಿಸಿದರು.
ಬಿಹಾರದ ಜನರು ಶ್ರಮಜೀವಿಗಳು ಎಂದ ಶಿವಕುಮಾರ್, ಕಾಂಗ್ರೆಸ್ ಬಿಹಾರದ ಜನರಿಗೆ ಎಲ್ಲಾ ಅಂಶಗಳಲ್ಲಿಯೂ ಉಪಯೋಗವಾಗುವ ದೃಷ್ಟಿಕೋನ ಹೊಂದಿದೆ, ಮಹಾಘಟಬಂಧನದ ಭಾಗವಾಗಿ ಬಿಹಾರದಲ್ಲಿ ಕೈ ಅಧಿಕಾರಕ್ಕೆ ಬಂದರೆ, ಕರ್ನಾಟಕದಂತಹ ಗ್ಯಾರಂಟಿ ಯೋಜನೆಗಳನ್ನು ಅಲ್ಲಿಯೂ ಜಾರಿಗೆ ತರುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟವನ್ನು ಟೀಕಿಸಿದ ಡಿಕೆಶಿ, ನಿತೀಶ್ ಕುಮಾರ್ ಯುಗ ಅಂತ್ಯಗೊಂಡಿದ್ದು, ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದಿಲ್ಲ, ಬಿಹಾರದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ, ಆದ್ದರಿಂದ ತೇಜಸ್ವಿ ಯಾದವ್ರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಬೆಂಬಲಿಸುವಂತೆ ನೆರೆದಿದ್ದವರನ್ನು ಒತ್ತಾಯಿಸುತ್ತಾ, ಎಲ್ಲಾ ವಲಸೆ ಕಾರ್ಮಿಕರಿಗೆ ಬಿಹಾರಕ್ಕೆ ಹೋಗಿ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸಲು ರಜೆ ನೀಡುವಂತೆ ಆಯಾ ಸಂಸ್ಥೆಗಳಿಗೆ ವಿನಂತಿಸುವುದಾಗಿ ತಿಳಿಸಿದರು.
ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್)