Conceptual image of a person voting, casting a ballot at a polling station, during elections. 
ನ್ಯೂಸ್

ಗೌಪ್ಯ ಮತದಾನಕ್ಕೆ ಅಪಮಾನ: ಮುಳ್ಳಹಳ್ಳಿಯಲ್ಲಿ ಮತ ಪ್ರದರ್ಶನ 9 ಮತ ಅಸಿಂಧುಗೊಳಿಸುವಂತೆ ಒತ್ತಾಯ

Ramanagara

ಕನಕಪುರ :  ಯಾರಿಗೆ ಮತ ಹಾಕಿದ್ದೇವೆ ಎಂಬುದನ್ನು ಬಹಿರಂಗಪಡಿಸಿದ ವಿಚಾರವಾಗಿ ಜೆಡಿಎಸ್, ಕಾಂಗ್ರೆಸ್‌ನ ಬೂತ್ ಏಜೆಂಟರ ನಡುವೆ ಮಾತಿನ ಚಕಮಕಿ ನಡೆದಿದೆ.

ವಿಧಾನ ಪರಿಷತ್‌ಗೆ ಶುಕ್ರವಾರ ನಡೆದ ಮತದಾನದ ವೇಳೆ ಕೋಡಿಹಳ್ಳಿ ಹೋಬಳಿಯ ಮುಳ್ಳಹಳ್ಳಿ ಗ್ರಾಪಂ ಮತಗಟ್ಟೆ ಸಂಖ್ಯೆ 219ರಲ್ಲಿ 7 ಮತದಾರರು ಮತ ಚಲಾಯಿಸಿದ ನಂತರ ಯಾರಿಗೆ ಮತ ಹಾಕಿದ್ದೇವೆ ಎಂಬುದನ್ನು ಬಹಿರಂಗಪಡಿಸಿದ್ದ್ದು ಇದಕ್ಕೆ ಕಾರಣವಾಯಿತು.

ಮತ ಕೇಂದ್ರದಲ್ಲಿ ಓರ್ವ ಮಹಿಳೆ ಮತ ಚಲಾಯಿಸಿದ ನಂತರ ಕಾಂಗ್ರೆಸ್‌ನ ಬೂತ್ ಏಜೆಂಟ್ ರಾಜೇಂದ್ರ ಅವರಿಗೆ ಮತಪತ್ರ ತೋರಿಸಿದರು. ಈ ಬಗ್ಗೆ ಮತಗಟ್ಟೆ ಅಧಿಕಾರಿಗಳು ತಿಳಿವಳಿಕೆ ಹೇಳಿದರೂ 7 ಮಂದಿ ಈ ರೀತಿ ನಡೆದುಕೊಂಡರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಜೆಡಿಎಸ್‌ನ ಬೂತ್ ಏಜೆಂಟ್ ಎಂ.ಎಸ್. ಸುಂದರರಾಜ್, ಸಂಬಂಧಪಟ್ಟ ಪಿಆರ್‌ಒಗೆ ದೂರು ನೀಡಿ, ಮತಗಟ್ಟೆಯಲ್ಲಿ ಅಸಂಬದ್ಧ ವರ್ತನೆ ತೋರಿದ ಗ್ರಾಪಂ ಸದಸ್ಯರ ಸದಸ್ಯತ್ವ ರದ್ದುಗೊಳಿಸುವುದು ಅಲ್ಲದೆ, ಮತಗಟ್ಟೆಯಲ್ಲಿ ಈ ರೀತಿ ವರ್ತನೆಗೆ ಅವಕಾಶ ಮಾಡಿಕೊಟ್ಟ ಮತಗಟ್ಟೆ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಒಟ್ಟು 9 ಮತಗಳನ್ನು ಅಸಿಂಧುಗೊಳಿಸುವಂತೆ ಒತ್ತಾಯಿಸಿದರು.

ಗ್ರಾಪಂ ಸದಸ್ಯ ಬೊಮ್ಮನಹಳ್ಳಿ ಕುಮಾರ್, ಈ ರೀತಿ ಮತವನ್ನು ತೋರಿಸಿ ಹಾಕುವ ಮೂಲಕ ಮತದಾನ ಹಕ್ಕು ಮತ್ತು ರಹಸ್ಯ ಮತದಾನಕ್ಕೆ ಅಪಮಾನ ಮಾಡಿದಂತಾಗಿದೆ. ಮುಳ್ಳಹಳ್ಳಿ ಅಲ್ಲದೆ ತಾಲೂಕಿನ ಸಾತನೂರು ಹೋಬಳಿಯ ಅಚ್ಚಲು ಗ್ರಾಪಂನ ಇಬ್ಬರು ಸದಸ್ಯರು ತಮ್ಮ ವೋಟನ್ನು ಪ್ರದರ್ಶಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.