ಮದ್ದೂರು: ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಫಲವೇ ಕಾರಣ ಎಂದು ತಹಸೀಲ್ದಾರ್ ಡಾ.ಸ್ಮಿತಾ ರಾಮು ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಂಪೇಗೌಡರು ಎಲ್ಲ ಜನಾಂಗಕ್ಕೂ ಅನುಕೂಲವಾಗುವ ರೀತಿಯಲ್ಲಿ ಬೆಂಗಳೂರಿನಲ್ಲಿ ಹಲವಾರು ಪೇಟೆಗಳನ್ನು, ನೂರಾರು ಕೆರೆ-ಕಟ್ಟೆಗಳನ್ನು ನಿರ್ಮಾಣ ಮಾಡಿದರು. ಜತೆಗೆ ಪರಿಸರ ರಕ್ಷಣೆಗೆ ತಮ್ಮದೇ ಆದ ಅಪಾರವಾದ ಕೊಡುಗೆ ನೀಡುವ ಮೂಲಕ ಕೋಟ್ಯಂತರ ಜನಗಳಿಗೆ ಬದುಕು ಕಟ್ಟಿಕೊಳ್ಳಲು ನೆರವಾದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಎಸ್.ಬೋರೇಗೌಡ ಕೆಂಪೇಗೌಡರ ಕುರಿತು ವಿಶೇಷ ಭಾಷಣ ಮಾಡಿದರು. ಸನ್ಮಾನ: ನಾರಾಯಣಸ್ವಾಮಿ, ಇಬ್ರಾಹಿಂ ಬೇಗ್ ಉತ್ತಮ ಗ್ರಾಹಕ ಸ್ನೇಹಿ, ಬಿ.ಸಿ.ಜಯಶಂಕರ ಪರಿಸರ ಪ್ರೇಮಿ, ಕೆ.ಶಿವಾನಂದ, ಚನ್ನಪ್ಪ ಸಮಾಜ ಸೇವೆ, ಸುರೇಶ್‌ಗೌಡ ಯುವಜನ ಸೇವೆ, ಬಿ.ಎಂ.ಪ್ರಕಾಶ್, ಪ್ರಗತಿಪರ ರೈತ ಎ.ನಾಗರಾಜು, ಸಿ.ಕೃಷ್ಣೇಗೌಡ ರಂಗಭೂಮಿ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿವಿಧ ಶಾಲೆಯ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.
ಪುರಸಭಾ ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯರಾದ ಸರ್ವಮಂಗಳಾ, ಸಿದ್ದರಾಜು, ಮುಖ್ಯಾಧಿಕಾರಿ ಮೀನಾಕ್ಷಿ, ತಾಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ, ಬಿಇಒ ಎಸ್.ಪಿ.ಧನಂಜಯ, ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಚ್.ಆರ್.ಅನಂತೇಗೌಡ, ವಿವಿಧ ಸಂಘಟನೆಗಳ ಮುಖಂಡರಾದ ನ.ಲಿ.ಕೃಷ್ಣ, ವಿ.ಸಿ.ಉಮಾಶಂಕರ್, ದೇಶಹಳ್ಳಿ ಶಿವಪ್ಪ, ಶಿವಲಿಂಗೇಗೌಡ, ಪ್ರೊ.ಕೃಷ್ಣ, ಎಸ್.ಅಶೋಕ್, ಜಯಂತಿಲಾಲ್ ಪಟೇಲ್, ಸುನೀಲ್‌ಕುಮಾರ್ ಇದ್ದರು.