ಮಡಸೂರು-ಲಿಂಗದಹಳ್ಳಿಯ ಸಾವಿತ್ರಮ್ಮ ಮತ್ತು ಎಲ್.ಟಿ.ತಿಮ್ಮಪ್ಪ ಹೆಗಡೆ ಪ್ರತಿಷ್ಠಾನದಿಂದ ಕಾನುಕೊಪ್ಪದಲ್ಲಿ ಏರ್ಪಡಿಸಿದ್ದ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರ ಸಂಸ್ಮರಣ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಇತರರಿದ್ದರು.  
ನ್ಯೂಸ್

ಬದುಕುವ ರೀತಿ ಎಲ್ಲರಿಗೂ ಮಾದರಿಯಾಗಲಿ

ಸಾಗರ: ತಾನು ಬದುಕುವ ರೀತಿ ಇತರರಿಗೆ ಮಾದರಿಯಾದಾಗ ಮಾತ್ರ ಸಾರ್ಥಕ ಕ್ಷಣ ಕಳೆಯಬಹುದು. ಆ ರೀತಿ ಬಾಳಿದ ಸಹಕಾರಿ ಧುರೀಣ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರ ಬದುಕು ಹಾಗೂ ಅವರ ಅವಿಭಕ್ತ ಕುಟುಂಬ ಎಲ್ಲರಿಗೂ ಉತ್ತಮ ಪಂಕ್ತಿ ಹಾಕಿಕೊಡುತ್ತಿದೆ ಎಂದು ವಿಧಾನಸಭಾ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲೂಕಿನ ಮಡಸೂರು-ಲಿಂಗದಹಳ್ಳಿಯ ಸಾವಿತ್ರಮ್ಮ ಮತ್ತು ಎಲ್.ಟಿ.ತಿಮ್ಮಪ್ಪ ಹೆಗಡೆ ಪ್ರತಿಷ್ಠಾನದಿಂದ ಕಾನುಕೊಪ್ಪದಲ್ಲಿ ಮಂಗಳವಾರ ಏರ್ಪಡಿಸಿದ್ದ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರ ಸಂಸ್ಮರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ವ್ಯವಸ್ಥೆಗೆ ಗೌರವ ತಂದುಕೊಟ್ಟ ಅಪರೂಪದ ರಾಜಕಾರಣಿಗಳಲ್ಲಿ ಎಲ್.ಟಿ. ತಿಮ್ಮಪ್ಪನವರು ಎದ್ದು ಕಾಣುತ್ತಾರೆ. ಪ್ರಸ್ತುತ ಅವರ ಕುಟುಂಬವನ್ನು ಗಮನಿಸಿದಾಗ ನಂಬಿಕೆ, ಪ್ರಾಮಾಣಿಕತೆ, ಭಾವನಾತ್ಮಕ ಸಂಬಂಧಗಳನ್ನು ಕಾಣಬಹುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಅತ್ಯಂತ ಸರಳ ಮತ್ತು ಸಜ್ಜನಿಕೆಯ ರಾಜಕಾರಣಿಯಾಗಿದ್ದ ಎಲ್.ಟಿ.ತಿಮ್ಮಪ್ಪ ಹೆಗಡೆಯವರು ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ರಾಜಕೀಯದ ಜತೆ ಬೇರೆಬೇರೆ ಕ್ಷೇತ್ರದಲ್ಲಿ ಸಹ ಅವರು ಗುರುತಿಸಿಕೊಂಡಿದ್ದರು ಎಂದರು.
ಎಲ್.ಟಿ.ತಿಮ್ಮಪ್ಪ ಹೆಗಡೆ ಕುರಿತು ರಂಗಕರ್ಮಿ ದೇವೇಂದ್ರ ಬೆಳೆಯೂರು ಉಪನ್ಯಾಸ ನೀಡಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಎಚ್.ಹಾಲಪ್ಪ ಹರತಾಳು, ಸೂಡಾ ಮಾಜಿ ಅಧ್ಯಕ್ಷ ಎಸ್.ದತ್ತಾತ್ರಿ, ಮಾಜಿ ಶಾಸಕ ಸ್ವಾಮಿರಾವ್ ಮಾತನಾಡಿದರು. ವೇದಿಕೆಯಲ್ಲಿ ಎಲ್.ಟಿ.ಅಶೋಕ್ ಇದ್ದರು. ಗಣಪತಿ ಹೆಗಡೆ ವಂದಿಸಿ, ರಾಜಲಕ್ಷ್ಮೀ ನಿರೂಪಿಸಿದರು. ವಸುಧಾ ಶರ್ಮ ಹಳೆ ಇಕ್ಕೇರಿ ಹಾಗೂ ಸಂಗಡಿಗರ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.