ನ್ಯೂಸ್

ಜೆಡಿಎಸ್ ತೊರೆದು ಬಿಜೆಪಿ ಸೇರಲು ನನಗೆ ಯಡಿಯೂರಪ್ಪ-ವಿಜಯೇಂದ್ರ ಹಣ ಕೊಡಲು ಬಂದಿದ್ರು: ವಿಶ್ವನಾಥ್​ ಸ್ಫೋಟಕ ಹೇಳಿಕೆ

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಚ್​.ವಿಶ್ವನಾಥ್​ ಅವರು ಇತ್ತೀಚಿಗೆ ಸ್ವಪಕ್ಷದ(ಬಿಜೆಪಿ) ವಿರುದ್ಧವೇ ಟೀಕಾಪ್ರಹಾರ ನಡೆಸುವ ಮೂಲಕ ಆಗಾಗ ಸುದ್ದಿಯಾಗುತ್ತಲೇ ಇದ್ದಾರೆ. ಬಿಜೆಪಿ ತೊರೆಯಲು ಸಜ್ಜಾಗಿರುವ ವಿಶ್ವನಾಥ್​, ಮತ್ತೆ ಕಾಂಗ್ರೆಸ್​ ಮನೆ ಪ್ರವೇಶಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇದರ ನಡುವೆ ಬಿಜೆಪಿ ವಿರುದ್ಧ ಹೊಸ ಬಾಂಬ್​ ಸಿಡಿಸಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ಉಂಟಾಗಿದೆ.

ಮೈಸೂರಿನಲ್ಲಿ ಇಂದು(ಗುರುವಾರ) ಸುದ್ದಿಗೋಷ್ಠಿ ನಡೆಸಿದ ವಿಶ್ವನಾಥ್​, ಬಿ.ಎಸ್​.ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ.ವಿಜಯೇಂದ್ರ ಹಾಗೂ ಶ್ರೀನಿವಾಸಪ್ರಸಾದ್ ಅವರು ನನಗೆ ಹಣ ಕೊಡಲು ಬಂದಿದ್ದರು‌. ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಲು ಹಣದ ಆಮಿಷ ಒಡ್ಡಿದ್ದರು ಎಂದರು.

ಆದರೆ ಎಷ್ಟು ಹಣ ಕೊಡಲು ಬಂದಿದ್ದರು? ನೀವು ಹಣ ಹಣಪಡೆದುಕೊಂಡಿರಾ? ಎಂಬ ಪ್ರಶ್ನೆಗೆ ಸೂಕ್ತ ಉತ್ತರ ನೀಡದೆ ಗುಟ್ಟುಬಿಟ್ಟುಕೊಡದ ವಿಶ್ವನಾಥ್, ಈ ಬಗ್ಗೆ ಬಾಂಬೆ ಡೈರೀಸ್ ನೋಡಿ. ಬಾಂಬೆ ಡೈರೀಸ್​ನ ಮೊದಲ ಅಧ್ಯಾಯದಲ್ಲೇ ಈ ವಿಚಾರವಿದೆ ಎನ್ನುವ ಮೂಲಕ ಕುತೂಹಲ ಹುಟ್ಟುಹಾಕಿದರು.

ನಾನು ಯಾವುದೇ ಕಾಂಗ್ರೆಸ್ ನಾಯಕರನ್ನು ಕದ್ದು ಮುಚ್ಚಿ ಭೇಟಿ ಮಾಡಿಲ್ಲ. ಎಲ್ಲ ಕಾಂಗ್ರೆಸ್ ನಾಯಕರನ್ನೂ ಬಹಿರಂಗವಾಗಿಯೇ ಸೌಜನ್ಯಯುತವಾಗಿ ಭೇಟಿ ಮಾಡಿದ್ದೇನೆ. ನಾನು ಎಂದಾದರೂ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರುತ್ತೇನೆಂದು ಹೇಳಿದ್ದೀನಾ? ನನ್ನನ್ನು ಬಿಜೆಪಿಗೆ ಸೇರಲು ಮಧ್ಯಸ್ಥಿಕೆ ವಹಿಸಿದವರು ಇದೇ ಶ್ರೀನಿವಾಸಪ್ರಸಾದ್. ಆದರೆ ನಾನು ಬಿಜೆಪಿ ಸೇರ್ಪಡೆಯಾದ ಬಳಿಕ ಯಡಿಯೂರಪ್ಪ ಆಗಲಿ, ಶ್ರೀನಿವಾಸಪ್ರಸಾದ್ ಸೇರಿದಂತೆ ಯಾವೊಬ್ಬ ಬಿಜೆಪಿ ನಾಯಕರೂ ನನ್ನ ನೆರವಿಗೆ ಬರಲಿಲ್ಲ. ನಾನು ಉಪ ಚುನಾವಣೆಯಲ್ಲಿ ಸೋತ ಬಳಿಕ ಎಂಎಲ್ಸಿ ಮಾಡಲು ನೆರವಾಗಿದ್ದು ಆರ್​ಎಸ್​ಎಸ್ ಮುಖಂಡ ಮುಕುಂದ. ಅವರಿಂದ ನಾನು ಎಂಎಲ್ಸಿ ಆದೆ ಎಂದರು.

ನನ್ನನ್ನು ಅಲೆಮಾರಿ ರಾಜಕಾರಣಿ ಎಂದು ಟೀಕಿಸಿರುವ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರೇ ನೀವೆಷ್ಟು ಪಕ್ಷಗಳನ್ನು ಬದಲಾಯಿಸಿದ್ದೀರಿ? ನೀವು ಒಂದೇ ಪಕ್ಷವನ್ನು ಎರಡೆರಡು ಬಾರಿ ಸೇರ್ಪಡೆಯಾಗಿದ್ದೀರಿ. ನೀವು ಅಲೆಮಾರಿಗಳ ರಾಜ ಎಂದು ವಿಶ್ವನಾಥ್ ಕಿಡಿಕಾರಿದರು.