ಭದ್ರಾವತಿಯಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯೆ ಡಾ. ಭಾಗ್ಯಲಕ್ಷ್ಮೀ ಆಚಾರ್ ಮಾತನಾಡಿದರು. ಬಿ.ಕೆ.ಮೋಹನ್, ಬಿ.ಕೆ.ಶ್ರೀನಾಥ್ ಇತರರಿದ್ದರು.  
ನ್ಯೂಸ್

ವಿಶ್ವಕರ್ಮ ಸಮಾಜ ಮೂಲ ಕಸುಬು ಬಿಡದಿರಲಿ

ಭದ್ರಾವತಿ: ಈ ಜಗತ್ತು ಇರುವವರೆಗೂ ವಿರಾಟ್ ವಿಶ್ವಕರ್ಮರು ಶಾಶ್ವತವಾಗಿ ನೆಲೆಸಿರುತ್ತಾರೆ. ಅವರು ಅಮರ ಬ್ರಹ್ಮ ಎಂದು ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ. ಭಾಗ್ಯಲಕ್ಷ್ಮೀ ಕೆ. ಆಚಾರ್ ಬಣ್ಣಿಸಿದರು.

ತಾಪಂ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಆಸ್ಥಾನ, ದೇವಸ್ಥಾನ, ದೇವರು, ಗೃಹ, ಗುಡಿ ಗೋಪುರಗಳನ್ನು ನಿರ್ಮಿಸುವ ವಿಶ್ವಕರ್ಮ ಸಮುದಾಯದವರು ದೇಶದಲ್ಲಿ ಪಂಚ ಕಸುಬುಗಳನ್ನು ಮಾಡುವ ಏಕೈಕ ಸಮುದಾಯ ಎಂದರು.

ದ್ವಾರಕಾ ನಗರವನ್ನು ನಿರ್ಮಿಸಿದ ಅಮರಶಿಲ್ಪಿ ಜಕಣಾಚಾರಿ ಈ ನಾಡಿಗೆ ನೀಡಿರುವ ಕೊಡುಗೆ ಅಪಾರವಾದುದು. ಅವರ ಹೆಸರನ್ನು ಭದ್ರಾ ನದಿಯ ಹೊಸಸೇತುವೆಗೆ ನಾಮಕಾರಣ ಮಾಡಿರುವುದು ಸಂತಸ ತಂದಿದೆ. ನಾವೆಲ್ಲರೂ ತಂದೆ-ತಾಯಿಯನ್ನು ಅವಲಂಬಿಸಿ ಅವರ ಮಾರ್ಗದರ್ಶನದಲ್ಲಿ ಬೆಳೆಯುತ್ತ ಬಂದಿದ್ದೇವೆ. ಯಾರೂ ಸಹ ತಮ್ಮ ಕುಲಕಸುಬನ್ನು ಬಿಡಬೇಡಿ. ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಎಂದು ತಿಳಿಸಿದರು.

ಅತಂತ್ರ, ಕುತಂತ್ರ ಹಾಗೂ ಪರತಂತ್ರದ ಮೂಲಕ ಜೀವನ ನಡೆಸದೆ ಸ್ವತಂತ್ರ ಭಾವನೆಯಿಂದ ಹೆಜ್ಜೆ ಇಡಬೇಕು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮುಂದುವರಿದಿರುವ ನಮಗೆ ರಾಜಕೀಯ ಪ್ರಾತಿನಿಧ್ಯ ಇಲ್ಲವಾಗಿದೆ. ಅದನ್ನು ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಮಾಡಬೇಕಿದೆ ಎಂದರು.

ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಆಡುಮುಟ್ಟದ ಸೊಪ್ಪಿಲ್ಲ, ವಿಶ್ವಕರ್ಮ ಸಮುದಾಯದ ಜನರು ಮಾಡದ ಕಸುಬಿಲ್ಲ. ದೇವಸ್ಥಾನದಿಂದ ಬಂಗಾರದ ಕೆಲಸದವರೆಗೂ ಮಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಶಿರಸ್ತೇದಾರ್ ಪ್ರದೀಪ್, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಬಿ.ಕೆ.ಶ್ರೀನಾಥ್, ನಗರಸಭೆ ಪೌರಾಯುಕ್ತ ಹೇಮಂತ್, ತಾಪಂ ಇಒ ಗಂಗಣ್ಣ, ಬಿ.ಎನ್.ರಾಜು, ಶಶಿಕುಮಾರ್ ಗೌಡ ಇತರರಿದ್ದರು.