ಹುಣಸೂರು: ಬ್ರಹ್ಮ ವಿಶ್ವಸೃಷ್ಟಿಯ ಕರ್ತೃ ಆಗಿದ್ದರೆ, ವಿಶ್ವಕರ್ಮ ವಿಶ್ವಸೃಷ್ಟಿಗೆ ಸುಂದರ ರೂಪ ನೀಡಿದ ಮಹಾನ್ ಶಿಲ್ಪಿ ಎಂದು ತಹಸೀಲ್ದಾರ್ ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶ್ವಕರ್ಮ ಪ್ರತಿಯೊಂದು ಯುಗದಲ್ಲೂ ತನ್ನದೇ ಛಾಪನ್ನು ಮೂಡಿಸಿದವರು. ಪಂಚಮುಖದೊಂದಿಗೆ ಪಂಚಕಸುಬಿನ ಮೂಲಕ ಸಮಾಜದಲ್ಲಿ ಕಾಯಕಗಳ ಮುಖಾಂತರ ಸೌಹಾರ್ಧತೆ ಮತ್ತು ಸಮಾನತೆಯ ಮಂತ್ರ ಜಪಿಸಿದವರು. ವಿಶ್ವಕರ್ಮರು ಬದುಕಿನ ಕಾಯಕಕ್ಕಾಗಿ ಸೃಷ್ಟಿಸಿದ ಸಲಕರಣೆಗಳು ಸಮಾಜದ ಸೌಹಾರ್ಧತೆಯ ದ್ಯೋತಕವಾಗಿದೆ ಎಂದರು.
ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಪಿ.ಕೃಷ್ಣಾಚಾರಿ ಮಾತನಾಡಿ, ಎಲ್ಲರ ಬೇಡಿಕೆಗಳನ್ನು ವಿಶ್ವ ಕರ್ಮರು ಈಡೇರಿಸುವ ಮೂಲಕ ಜನರಿಂದ ಆಶೀರ್ವಾದ ಪಡೆಯುತ್ತಿದ್ದಾರೆ ಎಂದರು.
ವಕೀಲ ಪುಟ್ಟರಾಜು ಮತ್ತು ದಲಿತ ಮುಖಂಡ ಡಿ.ಕುಮಾರ್ ಮಾತನಾಡಿ, ಮಹನೀಯರ ಜಯಂತಿಗಳು ಎಲ್ಲ ಸಮುದಾಯಗಳನ್ನು ಒಳಗೊಂಡು ಆಚರಿಸುವಂತಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜದ ಹಿರಿಯ ಮುಖಂಡ ಚಂದ್ರಾಚಾರಿ ಮಾತನಾಡಿದರು. ಸಮಾರಂಭದಲ್ಲಿ ಪೌರಾಯುಕ್ತೆ ಕೆ.ಮಾನಸ, ಉಪತಹಸೀಲ್ದಾರ್ ನರಸಿಂಹಯ್ಯ, ಮುಖಂಡ ಕೆ.ಕುಮಾರ್, ಕುಬೇರ, ಶಿವರುದ್ರಾಚಾರ್, ನಾರಾಯಣ, ಕೃಷ್ಣಾಚಾರ್, ಸುರೇಶ್, ಶ್ರೀಕಂಠ, ಸುಬ್ಬಣ್ಣ, ಶಿರಸ್ತೇದಾರ್ ಶ್ರೀಪಾದ್, ವಿ.ಎನ್.ದಾಸ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ಪಿ.ಆರ್.ರಾಚಪ್ಪ, ಸುಬ್ಬಣ್ಣ ಇತರರು ಇದ್ದರು.