ನ್ಯೂಸ್

ಕುಶಲಕರ್ವಿುಗಳಿಗೆ ವಿಶ್ವಕರ್ಮ: 30ಲಕ್ಷ ಜನರಿಗೆ ಪ್ರಯೋಜನ; ಶೇ.5ರ ಬಡ್ಡಿದರದಲ್ಲಿ ಸಾಲ ಸೌಲಭ್ಯ

Webdesk - Ravikanth

ನವದೆಹಲಿ: ಕೆಂಪುಕೋಟೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಪ್ರಸ್ತಾಪಿಸಿದ್ದ ಪಿಎಂ ವಿಶ್ವಕರ್ಮ ಯೋಜನೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕುಶಲಕರ್ವಿುಗಳ ಬದುಕು ಉಜ್ವಲಗೊಳಿಸುವ ಉದ್ದೇಶದ 13 ಸಾವಿರ ಕೋಟಿ ರೂ. ವೆಚ್ಚದ ಪಿಎಂ ವಿಶ್ವಕರ್ಮ ಯೋಜನೆ, ಮಾಲಿನ್ಯ ನಿಯಂತ್ರಣಕ್ಕೆ ಪೂರಕವಾದ 57,613 ಕೋಟಿ ರೂ. ವೆಚ್ಚದ ಪಿಎಂ ಇ-ಬಸ್ ಸೇವೆ, ರೈಲ್ವೆ ಜಾಲ ಬಲಪಡಿಸುವ 35 ಸಾವಿರ ಕೋಟಿ ರೂ. ವೆಚ್ಚದ ಹೊಸ ರೈಲ್ವೆ ಯೋಜನೆ, 14,903 ಕೋಟಿ ರೂ. ವೆಚ್ಚದ

ಡಿಜಿಟಲ್ ಇಂಡಿಯಾ ವಿಸ್ತರಣೆಗೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಅಸ್ತು ಎಂದಿದೆ. ಗುರು ಶಿಷ್ಯ ಪರಂಪರೆ ಮತ್ತು ಕುಟುಂಬ ಆಧಾರಿತ ಸಾಂಪ್ರದಾಯಿಕ ಕರಕುಶಲ, ಕುಶಲಕರ್ವಿುಗಳ ಕೆಲಸ ಪೋ›ತ್ಸಾಹಿಸಿ ಅವರನ್ನು ಬಲಪಡಿಸುವುದು ಪಿಎಂ ವಿಶ್ವಕರ್ಮ ಯೋಜನೆಯ ಉದ್ದೇಶವಾಗಿದೆ. ಮುಂದಿನ ಐದು ವರ್ಷಗಳ ಅವಧಿಗೆ (2023-24ರಿಂದ 2027-28) ಅನ್ವಯವಾಗುವಂತೆ 13,000 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಈ ಯೋಜನೆ ಕುಶಲಕರ್ವಿುಗಳ ಉತ್ಪನ್ನಗಳು, ಅವರ ಸೇವೆಗಳ ವ್ಯಾಪ್ತಿಯನ್ನು ಹೆಚ್ಚಿಸುವ ಹಾಗೂ ವಿಶ್ವಕರ್ಮರನ್ನು ದೇಶೀಯ ಮತ್ತು ಜಾಗತಿಕ ಮೌಲ್ಯ ಸರಪಳಿಯೊಂದಿಗೆ ಬೆಸೆಯಲಿದೆ. ಈ ಯೋಜನೆಯಡಿ ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ ನೀಡಲಾಗುವುದು. ಮೊದಲ ಹಂತದಲ್ಲಿ ಗರಿಷ್ಠ 1 ಲಕ್ಷ ರೂ., ಎರಡನೇ ಹಂತದಲ್ಲಿ 2 ಲಕ್ಷ ರೂ.ಗಳನ್ನು ಶೇ. 5 ಬಡ್ಡಿದರದೊಂದಿಗೆ ನೀಡಲಾಗುತ್ತದೆ.

ಯೋಜನೆಯಡಿ ಕೌಶಲವರ್ಧನೆ, ಉಪಕರಣ ಸಾಧನಗಳ ಕಿಟ್ ಪಡೆಯಲು ಸಹಾಯಧನ, ಡಿಜಿಟಲ್ ವಹಿವಾಟಿಗೆ ನೆರವು ಮತ್ತು ಮಾರುಕಟ್ಟೆ ಬೆಂಬಲವೂ ದೊರೆಯಲಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕರಕುಶಲ ಮತ್ತು ಕುಶಲಕರ್ವಿುಗಳನ್ನು ಗುರಿಯಾಗಿಸಿ ಯೋಜನೆ ರೂಪಿಸಲಾಗಿದ್ದು, 18 ಸಾಂಪ್ರದಾಯಿಕ ಕುಲಕಸುಬುಗಳನ್ನು ಮಾಡುವವರು ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.

ಇತರ ನಿರ್ಧಾರಗಳು

  • ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ಆಸ್ಟ್ರೇಲಿಯಾ ಸರ್ಕಾರದ ಆರೋಗ್ಯ ಮತ್ತು ಹಿರಿಯರ ಆರೈಕೆ ಇಲಾಖೆ ನಡುವೆ ಕ್ರೀಡೆಯಲ್ಲಿ ಸಹಕಾರ ಕುರಿತ ಒಡಂಬಡಿಕೆ
  • ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಕ್ಷೇತ್ರದಲ್ಲಿ ಭಾರತ ಮತ್ತು ಸುರಿನಾಮ್ ನಡುವೆ ಒಪ್ಪಂದಕ್ಕೆ ಅನುಮೋದನೆ.

ಪಿಎಂ ಇ-ಬಸ್ ಸೇವೆ

ನಗರಗಳಲ್ಲಿ ವಿದ್ಯುತ್​ಚಾಲಿತ ಬಸ್​ಗಳನ್ನು ಪಿಎಂ-ಇ-ಬಸ್ ಸೇವೆ ಹೆಚ್ಚಿಸಲಿದೆ. ಸಂಘಟಿತ ಬಸ್ ಸೇವೆಯನ್ನು ಹೊಂದಿರದ ನಗರಗಳಿಗೆ ಯೋಜನೆ ತಲುಪಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. 169 ನಗರಗಳಲ್ಲಿ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ 10,000 ಇ-ಬಸ್​ಗಳನ್ನು ನಿಯೋಜಿಸಲಾಗುವುದು. ಗ್ರೀನ್ ಅರ್ಬನ್ ಮೊಬಿಲಿಟಿ ಇನಿಶಿಯೇಟಿವ್ಸ್ ಯೋಜನೆ ಅಡಿಯಲ್ಲಿ 181 ನಗರಗಳಲ್ಲಿ ಮೂಲಸೌಕರ್ಯ ನವೀಕರಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ. ಯೋಜನೆಯ ಒಟ್ಟು ವೆಚ್ಚ 57,613 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಕೇಂದ್ರ ಸರ್ಕಾರ 20,000 ಕೋಟಿ ರೂ. ನೀಡಲಿದೆ. ಈ ಮೂಲಕ 55,000ವರೆಗೆ ನೇರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. 3 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ನಗರಗಳಿಗೆ ಯೋಜನೆ ಅನ್ವಯವಾಗಲಿದೆ.

ಯಾರೆಲ್ಲ ಅರ್ಹರು?

ಬಡಗಿಗಳು, ದೋಣಿ ತಯಾರಕರು, ಕಮ್ಮಾರರು, ಬೀಗ ತಯಾರಿಸುವವರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು, ಚಮ್ಮಾರರು, ರ್ದಜಿಗಳು, ಹೂ ಕಟ್ಟುವವರು, ದೋಬಿಗಳು, ಸಾಂಪ್ರದಾಯಿಕ ಗೊಂಬೆ ತಯಾರಕರು ಹಾಗೂ ಕಲ್ಲುಕುಟಿಗರು, ಕ್ಷೌರಿಕರು, ಮೀನು ಬಲೆ ತಯಾರಕರು, ಪೊರಕೆ ತಯಾರಿಸುವವರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಸಾಲದ ನೆರವಿನೊಂದಿಗೆ ಫಲಾನುಭವಿ ಗಳಿಗೆ ಇತ್ತೀಚಿನ ತಂತ್ರಜ್ಞಾನದ ಸವಲತ್ತು ದೊರಕಲಿದ್ದು, ಕರಕುಶಲ ವಸ್ತುಗಳಿಗೆ ಇದರಿಂದ ಜಾಗತಿಕ ಮಾರುಕಟ್ಟೆಗೆ ವ್ಯಾಪಕ ಪ್ರಮಾಣದಲ್ಲಿ ಪ್ರವೇಶ ಸಿಗಲಿದೆ. ಕೌಶಲ ತರಬೇತಿಗೆ ಪ್ರತಿದಿನ 500 ರೂ. ಸ್ಟೈಪೆಂಡ್ ಪಡೆಯುವ ಅವಕಾಶವಿದೆ. ಹಾಗೆಯೇ ಆಧುನಿಕ ಸಾಧನಗಳ ಖರೀದಿಗೆ 15,000 ರೂ ನೀಡಲಾಗುತ್ತದೆ. ಈ ಯೋಜನೆಗೆ ಹಳ್ಳಿಗಳಲ್ಲಿನ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕೂಡ ನೋಂದಾಯಿಸಿಕೊಳ್ಳಬಹುದು.

ಪ್ರಮುಖ ನಿರ್ಣಯಗಳು

  • ಪಿಎಂ ವಿಶ್ವಕರ್ಮ ಯೋಜನೆಗೆ 13 ಸಾವಿರ ಕೋಟಿ ರೂ.
  • ಪಿಎಂ ಇ-ಬಸ್ ಯೋಜನೆಗೆ 57,613 ಕೋಟಿ ರೂ.
  • ಡಿಜಿಟಲ್ ಇಂಡಿಯಾ ಯೋಜನೆ ವಿಸ್ತರಣೆಗಡೆ 14,903 ಕೋಟಿ ರೂ.
  • ಹೊಸ ರೈಲ್ವೆ ಯೋಜನೆಗಳಿಗೆ 35 ಸಾವಿರ ಕೋಟಿ ರೂ.

ಡಿಜಿಟಲ್ ಇಂಡಿಯಾ ವಿಸ್ತರಣೆ: ಜನರಿಗೆ ಡಿಜಿಟಲ್ ವ್ಯವಸ್ಥೆ ಮೂಲಕ ಸೇವೆಗಳನ್ನು ತಲುಪಿಸುವ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ ಒಟ್ಟು 14,903 ಕೋಟಿ ರೂ ಮೀಸಲಿಡಲಾಗಿದೆ.

ಯೋಜನೆಯ ಲಾಭವೇನು?

  • ಫ್ಯೂಚರ್ ಸ್ಕಿಲ್ಸ್ ಪ್ರೖೆಮ್ ಪೋ›ಗ್ರಾಂ (ಭವಿಷ್ಯದ ಕೌಶಲ ಪ್ರಮುಖ ಕಾರ್ಯಕ್ರಮ) ಅನ್ವಯ 6.25 ಲಕ್ಷ ಮಾಹಿತಿ ತಂತ್ರಜ್ಞಾನ ವೃತ್ತಿಪರರಿಗೆ ಮರು ಕೌಶಲ ಮತ್ತು ಉನ್ನತ ಕೌಶಲ ಪಡೆಯುವ ಅವಕಾಶ
  • ಮಾಹಿತಿ ಭದ್ರತೆ ಮತ್ತು ಶಿಕ್ಷಣ ಜಾಗೃತಿ ಹಂತ (ಐಎಸ್​ಇಎ) ಕಾರ್ಯಕ್ರಮದಡಿ 2.65 ಲಕ್ಷ ಜನರಿಗೆ ಮಾಹಿತಿ ಭದ್ರತೆಯಲ್ಲಿ ತರಬೇತಿ
  • ಹೊಸ ಯುಗದ ಆಡಳಿತಕ್ಕಾಗಿ ಏಕೀಕೃತ ಮೊಬೈಲ್ ಅಪ್ಲಿಕೇಶನ್ (ಉಮಂಗ್) / ಇದರಲ್ಲಿ 540 ಹೆಚ್ಚುವರಿ ಸೇವೆಗಳು ಲಭ್ಯವಿರುತ್ತವೆ. ಪ್ರಸ್ತುತ 1,700ಕ್ಕೂ ಹೆಚ್ಚು ಸೇವೆಗಳು ಉಮಂಗ್ ಆಪ್​ನಲ್ಲಿ ಲಭ್ಯವಿದೆ.
  • ರಾಷ್ಟ್ರೀಯ ಸೂಪರ್ ಕಂಪ್ಯೂಟರ್ ಮಿಷನ್ ಅಡಿಯಲ್ಲಿ ಇನ್ನೂ 9 ಸೂಪರ್ ಕಂಪ್ಯೂಟರ್​ಗಳನ್ನು ಸೇರಿಸಲಾಗುವುದು. ಇದು ಈಗಾಗಲೇ ನಿಯೋಜಿಸಲಾದ 18 ಸೂಪರ್ ಕಂಪ್ಯೂಟರ್​ಗಳಿಗೆ ಹೆಚ್ಚುವರಿಯಾಗಿರಲಿದೆ
  • ಭಾಷಿನಿ, ಕೃತಕ ಬುದ್ಧಿಮತ್ತೆ (ಎಐ)-ಸಕ್ರಿಯಗೊಳಿಸಿದ/ಅಳವಡಿಸಿದ ಬಹು-ಭಾಷಾ ಅನುವಾದ ಸಾಧನ (ಪ್ರಸ್ತುತ 10 ಭಾಷೆಗಳಲ್ಲಿ ಲಭ್ಯವಿದೆ) ಎಲ್ಲ 22 ಶೆಡ್ಯೂಲ್ 8 ಭಾಷೆಗಳಲ್ಲಿ ಕಾರ್ಯಾಚರಿಸುವಂತೆ ಮಾಡಲಾಗುತ್ತದೆ.
  • 1,787 ಶಿಕ್ಷಣ ಸಂಸ್ಥೆಗಳನ್ನು ಸಂರ್ಪಸುವ ರಾಷ್ಟ್ರೀಯ ಜ್ಞಾನ ಜಾಲದ (ಎನ್​ಕೆಎನ್) ಆಧುನೀಕರಣ
  • ಡಿಜಿಲಾಕರ್ ಅಡಿಯಲ್ಲಿ ಡಿಜಿಟಲ್ ದಾಖಲೆ ಪರಿಶೀಲನೆ ಸೌಲಭ್ಯವು ಈಗ ಎಂಎಸ್​ಎಂಇಗಳು ಮತ್ತು ಇತರ ಸಂಸ್ಥೆಗಳಿಗೆ ಲಭ್ಯವಿರುತ್ತದೆ
  • 2/3 ಶ್ರೇಣಿಯ/ಹಂತದ ನಗರಗಳಲ್ಲಿ 1,200 ನವೋದ್ಯಮಗಳಿಗೆ (ಸ್ಟಾರ್ಟಪ್​ಗಳಿಗೆ) ಬೆಂಬಲ ನೀಡಲಾಗುವುದು.
  • ಆರೋಗ್ಯ, ಕೃಷಿ ಮತ್ತು ಸುಸ್ಥಿರ ನಗರಗಳ ಕುರಿತಂತೆ ಕೃತಕ ಬುದ್ಧಿಮತ್ತೆಯಲ್ಲಿ ಉತ್ಕೃಷ್ಟತೆಯ 3 ಕೇಂದ್ರಗಳನ್ನು ಸ್ಥಾಪಿಸಲಾಗುವುದು
  • 12 ಕೋಟಿ ಕಾಲೇಜು ವಿದ್ಯಾರ್ಥಿಗಳಿಗೆ ಸೈಬರ್ ಜಾಗೃತಿ ಕೋರ್ಸ್​ಗಳು
  • ಸಾಧನಗಳ/ಸಲಕರಣೆಗಳ ಅಭಿವೃದ್ಧಿ ಮತ್ತು ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರದೊಂದಿಗೆ 200ಕ್ಕೂ ಹೆಚ್ಚು ಸೈಟ್​ಗಳ ಏಕೀಕರಣ ಸೇರಿದಂತೆ ಸೈಬರ್ ಭದ್ರತೆ ಕ್ಷೇತ್ರದಲ್ಲಿ ಹೊಸ ಉಪಕ್ರಮಗಳು.