ನ್ಯೂಸ್

ವಿಶ್ವಕರ್ಮ ಸಂಸ್ಕೃತಿ ಮುಂದಿನ ಪೀಳಿಗೆಗೆ ಪರಿಚಯಿಸಿ: ಡಾ.ಉಮೇಶ್ ಕುಮಾರ್

ಬೆಂಗಳೂರು: ವಿಶ್ವಕರ್ಮ ಸಂಸ್ಕೃತಿ ಪರಂಪರೆಯು ಜಗತ್ತಿನ ಶ್ರೀಮಂತ ಸಂಸ್ಕೃತಿಗಳಲ್ಲಿ ಒಂದಾಗಿದ್ದು, ಮುಂದಿನ ಪೀಳಿಗೆಗೆ ಸೂಕ್ತ ರೀತಿಯಲ್ಲಿ ಪರಿಚಯಿಸುವ ಅಗತ್ಯವಿದೆ ಎಂದು ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯಾಧ್ಯಕ್ಷ ಡಾ. ಬಿ.ಎಂ. ಉಮೇಶ್ ಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಎಚ್. ಎ. ಎಲ್. ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಮಾಜ ಆಯೋಜಿಸಿದ್ದ ವಿಶ್ವಕರ್ಮ ಪೂಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಾವೇಲ್ಲರು ವಿಶ್ವಕರ್ಮ ಸಮಾಜದಲ್ಲಿ ಜನಿಸಿರುವುದು ಹೆಮ್ಮೆ ಪಡುವಂತ ವಿಷಯವಾಗಿದೆ. ಏಕೆಂದರೆ ನಮ್ಮಷ್ಟು ಕೌಶಲ್ಯ ಹೊಂದಿದ ಇನ್ನೊಂದು ಸಮುದಾಯವಿಲ್ಲ. ಹಾಗೆಯೇ ನಮ್ಮಷ್ಟು ಶ್ರಮ ಪಡುವ ಇನ್ನೊಂದು ಸಮುದಾಯವೂ ಇಲ್ಲ. ಇತರೆ ಎಲ್ಲ ಸಮುದಾಯಗಳಿಗಿಂತ ಹೆಚ್ಚಿನ ಕೌಶಲ್ಯವನ್ನು, ಪಂಚ ಕಸುಬುಗಳ ಮೂಲಕ ಭಗವಾನ್ ವಿಶ್ವಕರ್ಮ ದೇವರು ನಮಗೆ ದಯಪಾಲಿಸಿದ್ದಾರೆ ಎಂದು ಹೇಳಿದರು.

ಇಂದಿನ ಆಧುನಿಕ ಜಗತ್ತಿನಲ್ಲಿ ಯುವ ಪೀಳಿಗೆ ಹಾಗೂ ಮಕ್ಕಳಿಗೆ ನಮ್ಮ ಸಂಸ್ಕೃತಿ ಬಗ್ಗೆ ಅರಿವು ಕಡಿಮೆಯಾಗುತ್ತಿದೆ. ಅವರಲ್ಲಿ ಸಂಸ್ಕೃತಿ-ಪರಂಪರೆಯ ಅರಿವನ್ನು ಹೆಚ್ಚು ಮಾಡಿ, ಅವರೂ ಸಹ ತಮ್ಮ ಸಮುದಾಯದ ಬಗ್ಗೆ ಹೆಮ್ಮೆ ಪಡುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ಹಲವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಸಂಘದ ಅಧ್ಯಕ್ಷ ಲಲಿತೇಶ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಉಪಾಧ್ಯಕ್ಷ ಪ್ರಸನ್ನ, ನರಸಿಂಹ ಖಜಾಂಚಿ ನಂಜುಂಡಸ್ವಾಮಿ , ಶಂಕರ್.ಜಿ ಸೇರಿ ಹಲವರು ಉಪಸ್ಥಿತರಿದ್ದರು.