ನ್ಯೂಸ್

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ

ಕಲಘಟಗಿ: 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ನೆಲೆಗಟ್ಟಲ್ಲಿ ಜಾತಿ ಮತ್ತು ಲಿಂಗ ಭೇದ ಮಾಡದೇ ಸರ್ವರಿಗೂ ಸಮಾನತೆ ನೀಡಿದವರು ವಿಶ್ವಗುರು ಬಸವಣ್ಣನವರು. ರಾಜ್ಯ ಸರ್ಕಾರವು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಎಂದು ಘೊಷಿಸಿರುವುದು ಶ್ಲಾಘನೀಯ ಎಂದು ಹೈಕೋರ್ಟ್ ವಕೀಲ ಶರಣ ಕೆ.ಎಸ್. ಕೋರಿಶೆಟ್ಟರ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಧಾರವಾಡ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಕಲಘಟಗಿ ಶರಣರ ಬಳಗ ಹಿರೇಹೊನ್ನಿಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಅನುಭವ ಮಂಟಪದಲ್ಲಿ ಇತ್ತೀಚೆಗೆ ಜರುಗಿದ ದತ್ತಿ ಉಪನ್ಯಾಸ ಹಾಗೂ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಕನ್ನಡವನ್ನೇ ರಾಷ್ಟ್ರ ಭಾಷೆ ಮಾಡಿದವರು ಬಸವಣ್ಣನವರು. ಎಲ್ಲರಿಗೂ ತಿಳಿಯುವ ಸರಳ ಭಾಷೆ ಕನ್ನಡದಲ್ಲಿಯೇ ಬಸವಾದಿ ಶರಣರು ವಚನಗಳನ್ನು ರಚಿಸಿದರು. ನಡೆಯೊಂದು ಪರಿ ನುಡಿಯೊಂದು ಪರಿ ಇರುವ ಕಾಲದಲ್ಲಿ ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮವು ನಡೆ ನುಡಿ ಒಂದಾದ ಆಚಾರಗಳಲ್ಲಿ ನಡೆಯುತ್ತಿದೆ. ಈ ತಾಲೂಕು ಶರಣರು ನಡೆದ ಹೋದ ನಾಡಾಗಿದೆ. ಶರಣರು ಹೆಜ್ಜೆ ಇಟ್ಟ ಧರೆ ಪಾವನವಯ್ಯ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಗಿರೀಶ ಮುಕ್ಕಲ್ಲ, ಶ.ಸಾ.ಪ ಅಧ್ಯಕ್ಷರಾದ ಗುರುಲಿಂಗ ಉಣಕಲ್ಲ ಮಾತನಾಡಿದರು.

ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಶರಣರ ಬಳಗ ಗೌರವಾಧ್ಯಕ್ಷ ಶಿವಲಿಂಗಪ್ಪ ಯಲಿವಾಳ, ಶ.ಸಾ.ಪ. ತಾಲೂಕು ಗೌರವಾಧ್ಯಕ್ಷ ಅಶೋಕ ಶಿಲವಂತರ, ತಿಪ್ಪಣ್ಣ ಕುರಗುಂದ, ರಾಜಶೇಖರ ಶೀಲವಂತರ, ಬಸವರಾಜ ದೊಡಮನಿ, ನೀಲಪ್ಪ ಮುತ್ತಗಿ, ರಾಮಣ್ಣ ಕೋಟಿ, ಬಸವರಾಜ ಮಾದಿ, ಶಂಕರ ದಾಸನಕೊಪ್ಪ, ಶಿವರುದ್ರ ಧನಿಗೊಂಡ, ನೀಲಪ್ಪ ಹಿರೇಗುಂಜಾಳ, ಬಸವಣ್ಣೆಪ್ಪ ಧನಿಗೊಂಡ, ರಮೇಶ ಮಡಿವಾಳರ, ದತ್ತಿದಾನಿಗಳ ಕುಟುಂಬ ವರ್ಗ, ಹಿರೇಹೊನ್ನಿಹಳ್ಳಿ ಬಸವತತ್ವ ಲಿಂಗಾನುಭಾವಿ ಶರಣರ ಬಳಗ, ಅನುಭವ ಮಂಟಪ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.