ಶಿವಮೊಗ್ಗ: ನದಿ ಮೂಲ ಸಂರಕ್ಷಣೆ ದೃಷ್ಟಿಯಿಂದ ಜಲದ ಬಗ್ಗೆ ಅಧ್ಯಯನ ನಡೆಸಲು ಪ್ರತ್ಯೇಕ ವಿಶ್ವ ವಿದ್ಯಾಲಯ ಸ್ಥಾಪನೆಯಾಗಬೇಕು. ಜಲದ ಬಗ್ಗೆಯೇ ರಾಷ್ಟ್ರೀಯ ಮ್ಯೂಸಿಯಂ ಆರಂಭಿಸಬೇಕು ಎಂಬುದು ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಪ್ರಮುಖ ಬೇಡಿಕೆಯಾಗಿದೆ ಎಂದು ಆಂದೋಲನದ ಸಂಚಾಲಕ ಬಸವರಾಜ ಪಾಟೀಲ್ ವೀರಾಪುರ ಹೇಳಿದರು.
ಬಹುಮುಖಿ ಸಂಘಟನೆಯಿಂದ ಶನಿವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಈಗಾಗಲೇ ನಮ್ಮ ಸಂಘಟನೆಯ ಒತ್ತಾಯದಿಂದ ಉಜ್ಜಯಿನಿಯಲ್ಲಿ ಗೋವುಗಳ ಸಂಬಂಧಿತ ಅಧ್ಯಯನಕ್ಕೆಂದು ಪ್ರತ್ಯೇಕ ವಿವಿ ಹಾಗೂ ಸಂಶೋಧನಾ ಕೇಂದ್ರಕ್ಕೆ ಭೂಮಿ ಮಂಜೂರಾಗಿದೆ. ಶೀಘ್ರದಲ್ಲೇ ಕೇಂದ್ರ ಸ್ಥಾಪನೆ ಸಂಬಂಧ ಕೆಲಸಗಳು ಆರಂಭವಾಗಲಿವೆ ಎಂದರು.
ಜಾಗತೀಕರಣದ ಪರಿಣಾಮದಿಂದಾಗಿ ವಿದೇಶಿ ಕಂಪನಿಗಳ ಅಕ್ರಮಣ, ವಿದೇಶಿ ಚಿಂತನೆಗಳು ನಮ್ಮನ್ನು ಆತಿಕ್ರಮಿಸಿಕೊಂಡಿವೆ. ಇದರ ವಿರುದ್ಧವಾಗಿ ಹೋರಾಟ ಮಾಡಲು ಗೋವಿಂದಾಚಾರ್ಯರು ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಆರಂಭಿಸಿದರು. ಇಂದು ವಿಕಾಸದ ಪರಿಕಲ್ಪನೆಯಲ್ಲೇ ನದಿ ಹಾಗೂ ಅರಣ್ಯ ನಾಶ ಸೇರಿದೆ. ಇದನ್ನು ನಮ್ಮ ಸಂಘಟನೆ ವಿರೋಧಿಸುತ್ತದೆ ಎಂದು ತಿಳಿಸಿದರು.
ನಾವು ಅಭಿವೃದ್ಧಿಗೆ ವಿರುದ್ಧವಾಗಿಲ್ಲ. ಸಮೃದ್ಧಿ ಹಾಗೂ ಸಂಸ್ಕೃತಿಯ ಸಮತೋಲನದ ಮೂಲಕ ವಿಕಾಸ ಆಗಬೇಕು ಎಂಬುದು ನಮ್ಮ ಸ್ಪಷ್ಟ ನಿಲುವಾಗಿದೆ. ಜಾಗತೀಕರಣ ವಿಕಾಸದ ಪರಿಕಲ್ಪನೆಯ ಕರಾಳತೆಯನ್ನು ನಾವಿಂದು ಕಾಣುತ್ತಿದ್ದೇವೆ. ಹಿಮಾಲಯದ ತಪ್ಪಲು, ಪಶ್ಚಿಮಘಟ್ಟ ಪ್ರದೇಶಗಳು ಇಂದು ಏನಾಗಿದೆ ಎಂಬುದನ್ನು ಒಮ್ಮೆ ಅವಲೋಕಿಸಬೇಕಿದೆ ಎಂದರು.
ಪ್ರಕೃತಿ ಎಂಬುದು ಭೋಗದ ವಸ್ತು ಎಂಬ ಪರಿಕಲ್ಪನೆ ಹುಟ್ಟಿದ್ದು ಕೈಗಾರಿಕಾ ಕ್ರಾಂತಿಯ ನಂತರ. ಆದರೆ ಇದು ವಾಸ್ತವವಲ್ಲ. ಪ್ರಕೃತಿ ಆಧಾರಿತ ಬದುಕು ನಮ್ಮದಾಗಬೇಕು. ವಿಕಾಸದಲ್ಲಿ ಪ್ರಕೃತಿ ಮೇಲೆ ಒಂದಿಷ್ಟು ಶೋಷಣೆಗಳಾಗುವುದು ಸಹಜ. ಅದಕ್ಕೆ ಪರ್ಯಾಯವನ್ನು ನಾವು ಗುರುತಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಧಾರವಾಡ ಐಐಟಿ ಸಂದರ್ಶಕ ಪ್ರಾಧ್ಯಾಪಕ ಡಾ.ಎಲ್.ಕೆ.ಶ್ರೀಪತಿ ಶಿವಮೊಗ್ಗದಲ್ಲಿ ತುಂಗೆ ಮಲಿನವಾಗುತ್ತಿರುವ ಕರಾಳತೆಯನ್ನು ವಿವರಿಸಿದರು.