ರಾಮನಗರ : ಅರ್ಥಶಾಸ್ತ್ರ ಸಿದ್ಧಾಂತಗಳ ಆಧಾರಿತ ಸರ್ಕಾರಿ ಆಡಳಿತ ವಿಶ್ವ ಅಭಿವೃದ್ಧಿಗೆ ಪೂರಕ. ಅರ್ಥಶಾಸ್ತ್ರ ತತ್ವಗಳ ಹೊರತಾದ ಆಡಳಿತ ಅಭಿವೃದ್ಧಿಗೆ ಮಾರಕ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಅಭಿಪ್ರಾಯಪಟ್ಟರು.
ಬಿಡದಿ ಶ್ರೀ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆ ಮತ್ತು ಜಿಲ್ಲಾ ಪ್ರಾಂಶುಪಾಲರ ಸಂಘ ಸಂಯುಕ್ತವಾಗಿ ಸೋಮವಾರ ಆಯೋಜಿಸಿದ್ದ ಅರ್ಥಶಾಸ್ತ್ರ ವಿಷಯಾಧಾರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅರ್ಥಶಾಸ್ತ್ರದಲ್ಲಿ ಬಜೆಟ್ ಮಂಡನೆ ಅತ್ಯಂತ ಪ್ರಮುಖವಾದ ವಿಷಯ. ಮನೆ ಮತ್ತು ಸಂಸ್ಥೆಯ ಆಡಳಿತ ನಿರ್ವಹಣೆಗೂ ಬಜೆಟ್ ಉಪಯುಕ್ತ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಂಡನೆ ಮಾಡಿರುವ ಬಜೆಟ್ ಸ್ವತಂತ್ರ ಭಾರತದ ಆಡಳಿತಾವಧಿಯಲ್ಲಿನ ಅತ್ಯಂತ ಕೆಟ್ಟ ಬಜೆಟ್‌ಗಳಾಗಿವೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಉತ್ಪಾದಕ ಉದ್ದೇಶಗಳಿಗೆ ಹಣ ಹೂಡಿಕೆ ಮಾಡಿ ಲಾಭ ಗಳಿಸದೆ, ಅನುತ್ಪಾದಕ ಉದ್ದೇಶಗಳಿಗೆ ಸಾಲದ ಹಣ ಬಳಸಿ ರಾಜ್ಯವನ್ನು ಆರ್ಥಿಕ ದಿವಾಳಿಯತ್ತ ಕೊಂಡೊಯ್ಯುತ್ತಿದೆ. ಅದೇ ರೀತಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಿದ್ದ 35 ಸಾವಿರ ಕೋಟಿ ರೂ. ಜಿಎಸ್‌ಟಿ ಪರಿಹಾರವನ್ನು ಕೊಡದೆ ವಂಚಿಸಿದೆ ಎಂದು ಆರೋಪಿಸಿದರು.ಡಾ.ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಜಿಡಿಪಿ ಶೇ.7ರಿಂದ 8ರಷ್ಟು ಪ್ರಗತಿ ಹೊಂದಿತ್ತು. ಇಂದು ಶೇ.2ಕ್ಕೆ ಕುಸಿದಿದೆ. ಜಿಡಿಪಿ ಕುಸಿದರೆ ರೂಪಾಯಿ ಅಪಮೌಲ್ಯವಾಗುತ್ತದೆ. ಮನಮೋಹನ್ ಸಿಂಗ್ ಅವರ ಸಲಹೆಯನ್ನು ಕೇಳದಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ವಿನಿಮಯ ದರ ಕುಸಿದು ದೇಶದ ಘನತೆಗೆ ಧಕ್ಕೆಯಾಗಿದೆ ಎಂದರು.
ಸಮಸ್ಯೆ ಆಲಿಸದ ಪ್ರಧಾನಿ : ಶೇ.70ರಷ್ಟಿರುವ ರೈತ ಸಮುದಾಯದ ಪ್ರತಿನಿಧಿಗಳು ಕೇಂದ್ರ ಜಾರಿಗೆ ತರಲು ಉದ್ದೇಶಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ದೇಶದ ರಾಜಧಾನಿ ದೆಹಲಿಯ ವಿವಿಧ ಗಡಿಗಳಲ್ಲಿ ಕಳೆದ 4 ತಿಂಗಳಿಂದ ಅಹಿಂಸಾತ್ಮಕ ಹೋರಾಟ ನಡೆಸುತ್ತಿದ್ದಾರೆ. 200ಕ್ಕೂ ಹೆಚ್ಚು ರೈತರು ಸಾವಿಗೀಡಾಗಿದ್ದಾರೆ. ಆದರೆ, ಪ್ರಧಾನಿ ನರೇಂದ್ರಮೋದಿ ಅವರು ಸಮಸ್ಯೆ ಆಲಿಸುವುದು.ಪಕ್ಕಕ್ಕಿರಲಿ ಸೌಜನ್ಯಕ್ಕಾದರೂ ಭೇಟಿ ನೀಡಲಿಲ್ಲ ಎಂದು ಲಿಂಗಪ್ಪ ವಿಷಾದಿಸಿದರು.
ಲಿತಾಂಶ ಉತ್ತಮಪಡಿಸಲು ಕಾರ್ಯಾಗಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗುರುಸಿದ್ದಯ್ಯ ಮಾತನಾಡಿ, ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶವನ್ನು ಉತ್ತಮಪಡಿಸುವ ಉದ್ದೇಶದಿಂದ ಕೆಲವು ಕಠಿಣ ವಿಷಯಗಳ ಕಾರ್ಯಾಗಾರ ನಡೆಸಲಾಗುತ್ತಿದೆ. ಉಪನ್ಯಾಸಕರು ಶಿಸ್ತು ಮತ್ತು ಶ್ರದ್ಧೆಯಿಂದ ಪಠ್ಯಕ್ರಮನ್ನು ಸಕಾಲದಲ್ಲಿ ಬೋಧನೆ ಮಾಡಿ ವಿದ್ಯಾರ್ಥಿಗಳಲ್ಲಿ ಅಧ್ಯಯನಶೀಲತೆ ಮತ್ತು ಆತ್ಮವಿಶ್ವಾಸ ಹೆಚ್ಚಿಸಬೇಕಿದೆ. ರಾಜ್ಯಮಟ್ಟದಲ್ಲಿ 24ನೇ ಸ್ಥಾನದಲ್ಲಿರುವ ರಾಮನಗರ ಜಿಲ್ಲೆಯ ಫಲಿತಾಂಶವನ್ನು ಹತ್ತರೊಳಗೆ ತರಲು ಈ ಕಾರ್ಯಾಗಾರಗಳು ನೆರವಾಗಲಿವೆ ಎಂದರು.ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಂ.ನಾರಾಯಣಪ್ಪ, ಪ್ರಾಂಶುಪಾಲ ಜಿ.ಶಿವಣ್ಣ ಮಾತನಾಡಿದರು.
ಎಂಎಲ್‌ಸಿ ಸಿ.ಎಂ.ಲಿಂಗಪ್ಪ, ನಿವೃತ್ತಿ ಹೊಂದಲಿರುವ ಪ್ರಾಂಶುಪಾಲ ನಾರಾಯಣಸ್ವಾಮಿ, ಉಪನ್ಯಾಸಕರಾದ ಎಂ.ಚಂದ್ರಶೇಖರ್, ಕಾಂತರಾಜ್ ಅವರನ್ನು ಅಭಿನಂದಿಸಲಾಯಿತು. ಪ್ರಾಂಶುಪಾಲ ವೀರಭದ್ರಯ್ಯ, ಪ್ರಾಂಶುಪಾಲರ ಸಂಘದ ಖಜಾಂಚಿ ಎಂ.ಕೃಷ್ಣ, ವೀರರಾಜು, ಉಪನ್ಯಾಸಕರಾದ ಸಿ.ಬೆಟ್ಟಸ್ವಾಮಿ, ಡಿ.ನಾಗರಾಜು, ಜೆ.ಬಿ.ಚೆನ್ನವೀರಯ್ಯ, ಹರೀಶ್, ಲೋಹಿತ್, ಸಿದ್ದೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಪವಿತ್ರ, ಡಾ.ದೀಪ, ಮಂಚನಾಯಕನಹಳ್ಳಿ ಗ್ರಾಪಂ ಸದಸ್ಯ ಸಂಪತ್‌ಕುಮಾರ್ ಇದ್ದರು.