ನ್ಯೂಯಾರ್ಕ್: ಡೊನಾಲ್ಡ್ ಟ್ರಂಪ್ ತಮ್ಮ ಅಧಿಕಾರವಧಿ ಮುಕ್ತಾಯಗೊಳ್ಳುವುದರೊಳಗಾಗಿ ಚೀನಾದ ಜತೆ ಈಗಾಗಲೇ ಹದಗೆಟ್ಟಿರುವ ಸಂಬಂಧವನ್ನು ಹಾಗೂ ಉಂಟಾಗಿರುವ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿ ಬೈಡೆನ್ ಆಡಳಿತಕ್ಕೆ ಸಂಕಷ್ಟ ಉಂಟುಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕರೊನಾ ವೈರಸ್ ಸಂಬಂಧ ಚೀನಾ ವಿರುದ್ಧದ ತಮ್ಮ ಆರೋಪಗಳನ್ನು ಮುಂದುವರಿಸಿರುವ ಟ್ರಂಪ್, ಚೀನಾವನ್ನು ಬೇಕಂತಲೇ ಕೆರಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಮತ್ತೊಂದು ಕ್ರಮವೆಂದರೆ, ಕ್ಸಿನ್ಜಿಯಾಂಗ್ನಲ್ಲಿ ಉಯಿಘರ್ ಮುಸ್ಲಿಮರನ್ನು ಸಾಮೂಹಿಕವಾಗಿ ಬಂಧಿಸಿದ್ದಕ್ಕಾಗಿ ಚೀನಾದ ವಿರುದ್ಧ ಬಹಿರಂಗವಾಗಿ ಕಿಡಿ ಕಾರಬಹುದು. ಜತೆಗೆ ಚೀನಾದ ಕಮ್ಯುನಿಸ್ಟ ಪಕ್ಷದ ಹೆಚ್ಚಿನ ಅಧಿಕಾರಿಗಳಿಗೆ ಅಮೆರಿಕ ವೀಸಾಗಳನ್ನು ನಿರ್ಬಂಧಿಸಬಹುದು ಅಥವಾ ಬೀಜಿಂಗ್ 2022 ವಿಂಟರ್ ಒಲಂಪಿಕ್ಸ್ನಲ್ಲಿ ಭಾಗಿಯಾಗದಂತೆ ಅಮೆರಿಕದ ಕ್ರೀಡಾಪಟುಗಳಿಗೆ ಟ್ರಂಪ್ ಆದೇಶಿಸಬಹುದು ಎನ್ನಲಾಗಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಹೆಚ್ಚಿನ ಕಂಪನಿಗಳಿಗೆ ನಿರ್ಬಂಧ ವಿಧಿಸುವ ಮೂಲಕ ವ್ಯಾಪಾರ ಸಂಬಂಧದಲ್ಲಿ ಮತ್ತಷ್ಟು ಬಿರುಕು ಮೂಡಿಸುವುದೂ ಟ್ರಂಪ್ ಅವರ ಆಲೋಚನೆಗಳಲ್ಲಿರಬಹುದು ಎನ್ನಲಾಗಿದೆ. ಮಿಲಿಟರಿ ರಫ್ತುಗಳ ಮೇಲಿನ ನಿರ್ಬಂಧಗಳನ್ನು ವಿಸ್ತರಿಸುವುದು, ಚೀನಾದ ಆಪ್ಗಳನ್ನು ನಿಷೇಧಿಸುವುದು ಮತ್ತು ಹುವಾವೇ ಟೆಕ್ನಾಲಜೀಸ್ನ ಎಲ್ಲ ತಂತ್ರಜ್ಞಾನಗಳ ಮಾರಾಟವನ್ನು ನಿರ್ಬಂಧಿಸುವ ಸಂಭಾವ್ಯ ಕ್ರಮಗಳೂ ಇವೆ ಎನ್ನಲಾಗಿದೆ. ಈ ಎಲ್ಲ ಕ್ರಮಗಳು ಬೈಡೆನ್ ಆಡಳಿತಕ್ಕೆ ಸವಾಲುಗಳನ್ನು ಹೆಚ್ಚಿಸಬಹುದಾಗಿದೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುಂಡರೂ ಸಹ ಡೊನಾಲ್ಡ್ ಟ್ರಂಪ್ ಬಳಿ ಇನ್ನೂ 2 ತಿಂಗಳು ಅಧಿಕಾರವಿದ್ದು, ಈ ಅವಧಿಯಲ್ಲಿ ಅವರು ತಮ್ಮ ವಿರುದ್ಧ ಕೆಲಸ ಮಾಡಿದವರು ಹಾಗೂ ತಮ್ಮ ಶತ್ರುಗಳನ್ನು ಗುರಿಯಾಗಿಸಿಕೊಂಡು ಕೆಲ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರತಿಯೊಬ್ಬ ಅಧ್ಯಕ್ಷರೂ ಸಹ ತಮ್ಮ ಅಧಿಕಾರವಧಿಯ ಅಂತಿಮ ವೇಳೆಯಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ. ಅದರಂತೆ ಟ್ರಂಪ್ ಕೂಡ ಮುಂದಿನ ವರ್ಷ ಜನವರಿ 20ರಂದು ಕಚೇರಿ ತೊರೆಯುವುದರೊಳಗಾಗಿ ತಮ್ಮ ಶತ್ರುಗಳನ್ನು ಅಧಿಕಾರದಿಂದ ವಜಾಗೊಳಿಸಬಹುದು ಅಥವಾ ಗುರಿಯಾಗಿಸಿಕೊಳ್ಳಬಹುದು ಎನ್ನಲಾಗಿದೆ. ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಮತ್ತು ಕೇಂದ್ರ ಗುಪ್ತಚರ ಸಂಸ್ಥೆ ನಿರ್ದೇಶಕಿ ಗಿನಾ ಹಾಸ್ಪೆಲ್ ಅವರನ್ನು ಟ್ರಂಪ್ ತೆಗೆದುಹಾಕಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ. ಜತೆಗೆ ಎಫ್ಬಿಐ ನಿರ್ದೇಶಕ ಕ್ರಿಸ್ಟೋಫರ್ ವ್ರೇ ಮತ್ತು ಅಟಾರ್ನಿ ಜನರಲ್ ವಿಲಿಯಂ ಬಾರ್ ಅವರ ಜತೆಗಿನ ಟ್ರಂಪ್ ಸಂಬಂಧ ಚುನಾವಣೆಗೆ ಮುಂಚಿತವಾಗಿಯೇ ಹದಗೆಟ್ಟಿದ್ದು, ಇವರ ಸ್ಥಾನಗಳ ಮೇಲೂ ಟ್ರಂಪ್ ವಕ್ರದೃಷ್ಟಿ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ತಾವು ಅಧ್ಯಕ್ಷರಾಗಿದ್ದ ವೇಳೆಯಲ್ಲಿ ಟ್ರಂಪ್ ತಮ್ಮ ರಾಜಕೀಯ ವಿರೋಧಿಗಳ ಬಗ್ಗೆ ತನಿಖೆ ನಡೆಸಲು ಇಲಾಖೆಗಳ ಮೇಲೆ ಒತ್ತಡ ಹೇರಿದ್ದರು, ನಾಲ್ಕು ವರ್ಷದಲ್ಲಿ ಮೂವರು ಪ್ರಮುಖರನ್ನು ಕೆಲಸದಿಂದ ತೆಗೆದುಹಾಕಿದ್ದರು ಮತ್ತು ಯುರೋಪ್ ಹಾಗೂ ಪೆಸಿಫಿಕ್ ದೇಶಗಳೊಂದಿಗೆ ಮೈತ್ರಿ ಸಂಬಂಧದಲ್ಲಿ ಚೆಲ್ಲಾಟವಾಡಿದ್ದರು. ಈ ಮೂಲಕ ಟ್ರಂಪ್ ಮುಂದಿನ ಅಧ್ಯಕ್ಷ ಬೈಡೆನ್ ಆಡಳಿತ ಹಾದಿಗೆ ಹಲವು ಸಂಕಷ್ಟಗಳನ್ನು ತಂದೊಡ್ಡುವ ಸಾಧ್ಯತೆಯೂ ಇದೆ.
ಆತ್ಮನಿರ್ಭರ ಅಮೆರಿಕ ಪ್ಲ್ಯಾನ್
ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ನಡುವಿನ ಸ್ನೇಹದ ಹೊರತಾಗಿಯೂ ಕಳೆದ ನಾಲ್ಕು ವರ್ಷಗಳಲ್ಲಿ ವ್ಯಾಪಾರ ಕ್ಷೇತ್ರದಲ್ಲಿನ ಬಿರುಕನ್ನು ಸರಿಪಡಿಸಲಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ ಬೈಡನ್ ಅವರ ನೇತೃತ್ವದ ಆಡಳಿತ ನೀತಿಗಳು ಭಾರತದ ಜತೆಗಿನ ವ್ಯಾಪಾರ ಸಂಬಂಧದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಅಮೆರಿಕದ ಕಾರ್ವಿುಕ ವಲಯಕ್ಕೆ ಪರಿಹಾರ ನೀಡುವ ಸಲುವಾಗಿ ಮೇಡ್ ಇನ್ ಅಮೆರಿಕ ಯೋಜನೆ ಬಗ್ಗೆ ಬೈಡೆನ್ ಅವರ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಪ್ರಮುಖವಾಗಿ ಚೀನಾ ಸೇರಿ ವಿದೇಶಿ ಸರಕುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಇದು ಸೂಚಿಸುತ್ತದೆ.
ಬೈಡೆನ್ಗೆ ಸವಾಲು
ಡೊನಾಲ್ಡ್ ಟ್ರಂಪ್ ತಮ್ಮ ಅಧಿಕಾರವಧಿ ಮುಕ್ತಾಯಗೊಳ್ಳುವುದರೊಳಗಾಗಿ ಚೀನಾದ ಜತೆ ಈಗಾಗಲೇ ಹದಗೆಟ್ಟಿರುವ ಸಂಬಂಧವನ್ನು ಹಾಗೂ ಉಂಟಾಗಿರುವ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿ ಬೈಡೆನ್ ಆಡಳಿತಕ್ಕೆ ಸಂಕಷ್ಟ ಉಂಟುಮಾಡುವ ಸಾಧ್ಯತೆ ಇದೆ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕರೊನಾ ವೈರಸ್ ಸಂಬಂಧ ಚೀನಾ ವಿರುದ್ಧದ ತಮ್ಮ ಆರೋಪಗಳನ್ನು ಮುಂದುವರಿಸಿರುವ ಟ್ರಂಪ್, ಚೀನಾವನ್ನು ಬೇಕಂತಲೇ ಕೆರಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಮತ್ತೊಂದು ಸ್ಪೋಟಕ ಕ್ರಮವೆಂದರೆ, ಕ್ಸಿನ್ಜಿಯಾಂಗ್ನಲ್ಲಿ ಉಯಿಘರ್ ಮುಸ್ಲಿಮರನ್ನು ಸಾಮೂಹಿಕವಾಗಿ ಬಂಧಿಸಿದ್ದಕ್ಕಾಗಿ ಚೀನಾದ ವಿರುದ್ಧ ಬಹಿರಂಗವಾಗಿ ಕಿಡಿ ಕಾರಬಹುದು. ಜತೆಗೆ ಚೀನಾದ ಕಮ್ಯುನಿಸ್ಟ ಪಕ್ಷದ ಹೆಚ್ಚಿನ ಅಧಿಕಾರಿಗಳಿಗೆ ಅಮೆರಿಕ ವೀಸಾಗಳನ್ನು ನಿರ್ಬಂಧಿಸಬಹುದು ಅಥವಾ ಬೀಜಿಂಗ್ 2022 ವಿಂಟರ್ ಒಲಂಪಿಕ್ಸ್ನಲ್ಲಿ ಭಾಗಿಯಾಗದಂತೆ ಅಮೆರಿಕದ ಕ್ರೀಡಾಪಟುಗಳಿಗೆ ಟ್ರಂಪ್ ಆದೇಶಿಸಬಹುದು ಎನ್ನಲಾಗಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಹೆಚ್ಚಿನ ಕಂಪನಿಗಳಿಗೆ ನಿರ್ಬಂಧ ವಿಧಿಸುವ ಮೂಲಕ ವ್ಯಾಪಾರ ಸಂಬಂಧದಲ್ಲಿ ಮತ್ತಷ್ಟು ಬಿರುಕು ಮೂಡಿಸುವುದೂ ಟ್ರಂಪ್ ಅವರ ಆಲೋಚನೆಗಳಲ್ಲಿರಬಹುದು ಎನ್ನಲಾಗಿದೆ. ಮಿಲಿಟರಿ ರಫ್ತುಗಳ ಮೇಲಿನ ನಿರ್ಬಂಧಗಳನ್ನು ವಿಸ್ತರಿಸುವುದು, ಚೀನಾದ ಆಪ್ಗಳನ್ನು ನಿಷೇಧಿಸುವುದು ಮತ್ತು ಹುವಾವೇ ಟೆಕ್ನಾಲಜೀಸ್ನ ಎಲ್ಲ ತಂತ್ರಜ್ಞಾನಗಳ ಮಾರಾಟವನ್ನು ನಿರ್ಬಂಧಿಸುವ ಸಂಭಾವ್ಯ ಕ್ರಮಗಳೂ ಇವೆ ಎನ್ನಲಾಗಿದೆ. ಈ ಎಲ್ಲ ಕ್ರಮಗಳು ಬೈಡೆನ್ ಆಡಳಿತಕ್ಕೆ ಸವಾಲುಗಳನ್ನು ಹೆಚ್ಚಿಸಬಹುದಾಗಿದೆ.
ಬೈಡೆನ್ ಆದ್ಯತೆಗಳೇನು?
ಕರೊನಾ ಸಂಕ್ರಾಮಿಕತೆ ನಿರ್ವಹಣೆ, ಆರ್ಥಿಕತೆ ಚೇತರಿಕೆ, ಜನಾಂಗೀಯ ಸಮಾನತೆ ಮತ್ತು ಹವಾಮಾನ ಬದಲಾವಣೆ ನಿಯಂತ್ರಣ ತಮ್ಮ ಮುಂದಿರುವ ಪ್ರಮುಖ ನಾಲ್ಕು ಆದ್ಯತೆಗಳು ಎಂದು ಜೋ ಬೈಡೆನ್ ಹಾಗೂ ಕಮಲಾ ಹ್ಯಾರಿಸ್ ಅವರ ತಂಡ ಹೇಳಿದೆ. ಜನವರಿ 20ರಂದು ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಪ್ರಮಾಣವಚನ ಸ್ವೀಕರಿಸಲಿದ್ದು, ಪ್ರಮುಖ ನಾಲ್ಕು ಆದ್ಯತೆಗಳು ಸೇರಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಂಡ ಮಾಹಿತಿ ನೀಡಿದೆ.
ಕರೊನಾ ಟಾಸ್ಕ್ ಫೋರ್ಸ್ಗೆ ವಿವೇಕ್
ಅಮೆರಿಕದಲ್ಲಿ ಹೆಚ್ಚುತ್ತಿರುವ ಕರೊನಾ ಸೋಂಕನ್ನು ಹತೋಟಿಗೆ ತರಲು ವಿಜ್ಞಾನಿಗಳು ಮತ್ತು ತಜ್ಞರನ್ನು ಒಳಗೊಂಡ ಟಾಸ್ಕ್ಫೋರ್ಸ್ನ್ನು ಜೋ ಬೈಡೆನ್ ರಚಿಸಿದ್ದಾರೆ. ನಿರೀಕ್ಷೆಯಂತೆ ಕರ್ನಾಟಕದ ಮಂಡ್ಯ ಮೂಲದ ಡಾ. ವಿವೇಕ್ ಮೂರ್ತಿಯವರಿಗೆ ಟಾಸ್ಕ್ಫೋರ್ಸ್ನಲ್ಲಿ ಸಹ-ಅಧ್ಯಕ್ಷ ಜವಾಬ್ದಾರಿ ನೀಡಲಾಗಿದೆ. ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಫೆಡರಲ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ)ನ ಮಾಜಿ ಆಯುಕ್ತ ಡೇವಿಡ್ ಕೆಸ್ಲರ್ ಮತ್ತು ಯೇಲ್ ಸಾರ್ವಜನಿಕ ಆರೋಗ್ಯ ಪ್ರಾಧ್ಯಾಪಕ ಮಾರ್ಸೆಲ್ಲಾ ನುನೆಜ್-ಸ್ಮಿತ್ ಅವರು ಸಹ-ಅಧ್ಯಕ್ಷರಾಗಿದ್ದಾರೆ. ರೋಗನಿರೋಧಕ ತಜ್ಞರು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರಿಂದ ಹಿಡಿದು ಸಾರ್ವಜನಿಕ ಆರೋಗ್ಯ ಅಧಿಕಾರಿಗಳವರೆಗಿನ ಹತ್ತು ಸದಸ್ಯರು ಟಾಸ್ಕ್ಫೋರ್ಸ್ನಲ್ಲಿದ್ದಾರೆ. ಈ ಟಾಸ್ಕ್ಫೋರ್ಸ್ನ ಯೋಜನೆಗಳು ವಿಜ್ಞಾನಿಗಳ ಅಭಿಪ್ರಾಯದಂತೆ ರೂಪಿತವಾಗುತ್ತವೆ ಮತ್ತು ಈ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಇರುವುದಿಲ್ಲ ಎಂದು ಬೈಡನ್ ಭಾನುವಾರ ತಿಳಿಸಿದ್ದರು. ಮಂಡ್ಯದ ಹಲ್ಲೆಗೆರೆ ಮೂಲದ ಡಾ. ವಿವೇಕ್ ಮೂರ್ತಿ ಅವರು ಬರಾಕ್ ಒಬಾಮಾ ಅವಧಿಯಲ್ಲಿ 19ನೇ ಜನರಲ್ ಸರ್ಜನ್ ಹಾಗೂ ಆರೋಗ್ಯ ಸೇವೆ ಆಯೋಗದಲ್ಲಿ ವೈಸ್ ಅಡ್ಮಿರಲ್ ಆಗಿದ್ದರು.