ಭಾದ್ರಪದ ಮಾಸದ ಮೊದಲನೇ ಮಂಗಳವಾರ ಎಲ್ಲೆಡೆ ಶ್ರೀವೀರಭದ್ರ ಸ್ವಾಮಿ ಜಯಂತಿ ಆಚರಿಸಲಾಗುತ್ತದೆ. ನಾಡಿನಲ್ಲಿ ವೀರಭದ್ರ ಸ್ವಾಮಿಯನ್ನು ಕುಲದೇವರಾಗಿ ಆರಾಧಿಸುವ ಅತಿ ದೊಡ್ಡ ಭಕ್ತವರ್ಗ ಹಾಗೂ ವೀರಭದ್ರ ಕ್ಷೇತ್ರಗಳಿವೆ.
| ಪ್ರಶಾಂತ ರಿಪ್ಪನ್ಪೇಟೆ
ದೇವತೆಗಳ ಅವತಾರಕ್ಕೆ ಧರ್ಮದ ಉಳಿವು, ಅಧರ್ಮದ ನಾಶವೇ ಪ್ರಮುಖ ಅಂಶವಾಗಿರುವುದು ಪುರಾಣಗಳಿಂದ ತಿಳಿದು ಬರುತ್ತದೆ. ಅಂತೆಯೇ ಧರ್ಮದ್ರೋಹಿಗಳ ನಾಶಕ್ಕಾಗಿ ಅವತರಿಸಿದವನೇ ಉಗ್ರಸ್ವರೂಪಿ ಶ್ರೀವೀರಭದ್ರಸ್ವಾಮಿ. ಹೆಸರೇ ಹೇಳುವಂತೆ ಈತ ವೀರನೂ ಹೌದು ಭದ್ರನೂ ಹೌದು. ಭದ್ರನೆಂದರೆ ಮಂಗಲಕರ; ಭಕ್ತಿಯಿಂದ ಭಜಿಸುವವರಿಗೆ ಮಂಗಳಕರನಾದರೆ, ಅಹಂಕಾರದಿಂದ ಮೆರೆಯುವವರ ಪಾಲಿಗೆ ಶಿಕ್ಷಿಸುವ ವೀರ. ಅಂತಹ ವೀರಭದ್ರಸ್ವಾಮಿ ಅವತರಿಸಿದ ಪುಣ್ಯದಿನವೇ ಭಾದ್ರಪದ ಮಾಸದ ಮೊದಲನೇ ಮಂಗಳವಾರ.
ಶಿವದ್ರೋಹಿಯಾದ ದಕ್ಷಬ್ರಹ್ಮನ ಯಜ್ಞವನ್ನು ನಾಶಗೊಳಿಸಿ ದಕ್ಷನನ್ನು ಸಂಹರಿಸಿದ ಕತೆ ಎಲ್ಲರಿಗೂ ತಿಳಿದಿದೆ. ವೀರಭದ್ರಸ್ವಾಮಿ ಕೇವಲ ಪೌರಾಣಿಕ ಪುರುಷನಲ್ಲ. ಐತಿಹಾಸಿಕ, ಸಾಹಿತ್ಯಿಕ, ಸಾಂಸ್ಕೃತಿಕವಾಗಿಯೂ ಅಷ್ಟೇ ಪ್ರಸಿದ್ಧ. ಗಂಡುಕಲೆ ಎಂದೇ ಪ್ರಸಿದ್ಧವಾಗಿರುವ ವೀರಗಾಸೆಯ ಮೂಲಕ ವೀರಭದ್ರನ ಚರಿತ್ರೆ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿದೆ. ತ್ರೇತಾಯುಗದಲ್ಲಿ ವೀರಭದ್ರಸ್ವಾಮಿ ಆಂಜನೇಯನಿಗೆ ಲಿಂಗದೀಕ್ಷೆಯನ್ನು ನೀಡಿದ ಉಲ್ಲೇಖವಿದ್ದು, ದೀಕ್ಷೆ ನೀಡಿದ ಸ್ಥಳ ಕರ್ನಾಟಕದ ಹಂಪಿ ಎಂದು ಹೇಳಲಾಗುತ್ತದೆ. ಇದಕ್ಕೆ ಪೂರಕ ಎಂಬಂತೆ ಹಂಪಿಯ ಸುತ್ತಮುತ್ತ 80ಕ್ಕೂ ಹೆಚ್ಚು ವೀರಭದ್ರ ದೇವಾಲಯಗಳು ಇವೆ.
ನಾಡಿನಲ್ಲಿರುವ ಅಸಂಖ್ಯಾತ ವೀರಭದ್ರ ಕ್ಷೇತ್ರಗಳ ಮೂಲಸೆಲೆ ಶ್ರೀರಂಭಾಪುರಿ ಪೀಠದಲ್ಲಿರುವ ಕ್ಷೇತ್ರನಾಥ ವೀರಭದ್ರನ ಸಾನ್ನಿಧ್ಯ. ವೀರಶೈವಪಂಚಪೀಠಗಳಿಗೆ ಪ್ರತ್ಯೇಕ ಗೋತ್ರ-ಸೂತ್ರಗಳಿದ್ದು, ಪಡ್ವಿಡಿ ಸೂತ್ರದ ಶ್ರೀರಂಭಾಪುರಿ ಪೀಠದ ಗೋತ್ರಪುರುಷ ವೀರಭದ್ರಸ್ವಾಮಿ. ಇನ್ನುಳಿದಂತೆ ‘ಲಿಂಗಮಧ್ಯೆ ಜಗತ್ ಸರ್ವಂ’ ಎಂಬ ಉಕ್ತಿಗನುಗುಣವಾಗಿ ಲಿಂಗತತ್ವದ ಮಹಿಮೆಯನ್ನು ಭೂಮಂಡಲದಲ್ಲಿ ಸಾರಿದ ವೀರಭದ್ರೇಶ್ವರ ಚಿಕ್ಕೋಡಿ ತಾಲೂಕಿನ ಯಡೂರ ಕ್ಷೇತ್ರದಲ್ಲಿ ನೆಲೆಸಿದ್ದಾನೆ. ಇನ್ನುಳಿದಂತೆ ಗೊಡಚಿ, ಶಿಂಗಟಾಲೂರು, ಕಾರಟಗಿ, ಲಕ್ಕುಂಡಿ, ಭಾಲ್ಕಿ, ಕೆಂಜಿಗಾಪುರ, ಮಸರೂರು, ಕೆಳದಿ, ಮಾಚೋಹಳ್ಳಿ, ಆರಗ, ಹಿರಿಯಡ್ಕ, ಕೊಲ್ಲೂರು ಸೇರಿದಂತೆ ಅನೇಕ ವೀರಭದ್ರನ ದೇವಾಲಯಗಳು ಕರ್ನಾಟಕದಲ್ಲಿವೆ. ದೇಶದ ಇನ್ನಿತರ ಪ್ರಸಿದ್ಧ ಕ್ಷೇತ್ರಗಳಾದ ರಾಯಚೋಟಿ, ಲೇಪಾಕ್ಷಿ ಶ್ರೀಶೈಲ, ಉಜ್ಜಯಿನಿ, ಕಾಶಿ, ಕೇದಾರ, ಹರಿದ್ವಾರ ಮತ್ತಿತರ ಕಡೆಗಳಲ್ಲಿ ವೀರಭದ್ರ ಕ್ಷೇತ್ರಗಳಿವೆ.
ಎಲ್ಲರಿಂದ ಆರಾಧನೆ: ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳ ಕುಲದೈವನಾಗಿರುವ ವೀರಭದ್ರ, ಇತರ ಸಮುದಾಯದವರಿಗೂ ಆರಾಧ್ಯ ದೈವ. ಒಕ್ಕಲಿಗ ಸಮುದಾಯದ ನಾಡಪ್ರಭು ಕೆಂಪೇಗೌಡರು ಸಾವನದುರ್ಗ ಮತ್ತು ಶಿವಗಂಗೆಯ ವೀರಭದ್ರ ದೇವರ ಆರಾಧನೆ ಹಾಗೂ ದೇವಾಲಯಗಳ ಅಭಿವೃದ್ಧಿ ಮಾಡಿರುವುದು ಶಾಸನಗಳಿಂದ ತಿಳಿಯುತ್ತದೆ. ಕೆಂಪೇಗೌಡರ ಹಿರಿಯ ಸಹೋದರ ಪೆರಿಯ ಕೆಂಪೇಗೌಡರು ವಿಭೂತಿಪುರದ ವೀರಭದ್ರ ದೇಗುಲವನ್ನು ಜೀಣೋದ್ಧಾರ ಮಾಡಿದ್ದಾರೆ. ವೈಷ್ಣವನಾಗಿದ್ದ ಬಾಣದೊರೆ ನಂದಿವರ್ಮ, ಬಾದಾಮಿ ಚಾಲುಕ್ಯರ ಇತಿಹಾಸದಲ್ಲಿ ವೀರಭದ್ರನ ಉಲ್ಲೇಖಗಳಿವೆ. ಉತ್ತರ ಭಾರತದಲ್ಲಿ ಹೆಚ್ಚಾಗಿರುವ ಜಾಟ್ ಸಮುದಾಯದ ಮೂಲಪುರುಷ ವೀರಭದ್ರ. ದೇವಭೂಮಿ ಉತ್ತರಾಖಂಡದ ಪ್ರಸಿದ್ಧ ಹರಿದ್ವಾರದಲ್ಲಿ ಗಂಗಾನದಿ ದಂಡೆಯಲ್ಲಿರುವ ಕಣ್ಕಾಲ್ ಎಂಬ ಸ್ಥಳ ವೀರಭದ್ರನ ಅವತಾರ ಸ್ಥಾನ ಎಂದು ಹೇಳಲಾಗುತ್ತಿದ್ದು, ಅದಕ್ಕೆ ಪೂರಕವೆಂಬಂತೆ ದಾಕ್ಷಾಯಿಣಿ ಅಗ್ನಿ ಪ್ರವೇಶ ಮಾಡಿದ ಯಜ್ಞಕುಂಡ ಹಾಗೂ ದಕ್ಷೇಶ್ವರ ಮಹಾದೇವ ಮಂದಿರವನ್ನು ಕಾಣಬಹುದು.
ವೀರಭದ್ರಸ್ವಾಮಿ ಜಯಂತಿ: ಈ ಹಿಂದೆ ಶ್ರೀವೀರಭದ್ರಸ್ವಾಮಿ ಜಯಂತಿಯನ್ನು ಕೇವಲ ವೀರಭದ್ರ ದೇವಾಲಯಗಳಲ್ಲಿ ಆಚರಿಸಲಾಗು ತ್ತಿತ್ತು. ಆದರೆ ಇತ್ತೀಚೆಗೆ ಭಾಗೋಜಿಕೊಪ್ಪ, ಬಳ್ಳಾರಿಯ ಕಲ್ಯಾಣಮಠ, ಹುಕ್ಕೇರಿ ಹಿರೇಮಠ ಮತ್ತಿತರ ಶ್ರೀಗಳು ಹಾಗೂ ಕೆಲ ಸಂಘಟನೆಗಳ ಪ್ರಯತ್ನದ ಫಲವಾಗಿ, ಪ್ರತಿ ಮಠ-ಮಂದಿರ ಹಾಗೂ ಮನೆ ಮನೆಗಳಲ್ಲೂ ವೀರಭದ್ರ ಜಯಂತಿ ಆಚರಣೆಗೆ ಚಾಲನೆ ದೊರೆತಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ವೀರಭದ್ರ ಜಯಂತಿಯನ್ನು ಆಚರಿಸುವ ನಿಟ್ಟಿನಲ್ಲಿ ಸಂಘಟಕರು ಕಾರ್ಯಪ್ರವೃತ್ತರಾಗಿದ್ದಾರೆ.
ಸಾಹಿತ್ಯ-ಶಾಸನಗಳಲ್ಲಿ ವೀರಭದ್ರ: ಹಿರಿಯ ಸಂಶೋಧಕ ಡಾ.ಸಂಗಮೇಶ ಸವದತ್ತಿಮಠ ರವರು ಹೇಳುವಂತೆ ವೀರಭದ್ರ ದೇಸಿ ಸಂಸ್ಕೃತಿಯ ಮಹಾಪುರುಷ. ಕನ್ನಡ ಜನಪದ ಸಾಹಿತ್ಯದಲ್ಲಿ ವೀರಭದ್ರನ ಉಲ್ಲೇಖಗಳಿಗೆ ಲೆಕ್ಕವಿಲ್ಲ. ಕಾವ್ಯ, ನಾಟಕ, ಕಥೆ, ವಡಪು, ವಚನ, ಕಾಲಜ್ಞಾನ, ಪುರಾಣ, ಮಾತ್ರವಲ್ಲ ಹಿರಿಯ ಇತಿಹಾಸಕಾರ ಎಂ.ಜಿ.ನಾಗರಾಜರವರು ಗುರುತಿಸಿರುವಂತೆ ಸಿಂಧೂ ಸಂಸ್ಕೃತಿಯ ಲ್ಲಿರುವ ‘ರುದ್ರಪಶುಪತಿಯ ಉಬ್ಬುಶಿಲ್ಪ’ ವೀರಭದ್ರನ ಪ್ರಾಚೀನತೆಯನ್ನು ಸಾರುತ್ತದೆ. ಋಗ್ವೇದ, ಶರಭೋಪನಿಷತ್ತಿನಲ್ಲಿ ವೀರಭದ್ರನ ವರ್ಣನೆ ವಿವರವಾಗಿದ್ದು, ವೀರಗಾಸೆ, ಪುರವಂತರ ಜನಾಕರ್ಷಕ ಕಲೆಗೆ ವೀರೇಶ ಚರಿತ್ರೆಯೇ ಆಧಾರ.