ನವದೆಹಲಿ: 'ಒಗ್ಗಟ್ಟಿನಲ್ಲಿ ಬಲವಿದೆ' ಬಹುತೇಕ ಎಲ್ಲರೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕೇಳಿರುವ ಜನಪ್ರಿಯ ನುಡಿಗಟ್ಟು. ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಕೆಲವು ಪ್ರವಾಸಿಗರು ಈ ನುಡಿಗಟ್ಟಿಗೆ ತಕ್ಕ ದೃಶ್ಯವನ್ನು ನೇರವಾಗಿ ವೀಕ್ಷಿಸಿದರು. ಹೌದು, ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ಸಫಾರಿ ಆನಂದಿಸುತ್ತಿರುವಾಗ ಬಬೂನ್‌ಗಳಿಂದ ತುಂಬಿ ಹೋದ ರಸ್ತೆ ಕಂಡರು. ಪ್ರಾಣಿಗಳ ಗುಂಪು ಹಾದುಹೋಗಲಿ ಎಂದು ಕಾದು ಕುಳಿತಿದ್ದರಿಂದ ಸಂಚಾರವನ್ನು ನಿಧಾನಗೊಳಿಸಲಾಯಿತು. ಆದರೆ ಪೊದೆಗಳ ಹಿಂದೆ ಅಡಗಿದ್ದ ಚಿರತೆ ಹಠಾತ್ತನೆ ಬಬೂನ್ಗಳ ಮೇಲೆ ದಾಳಿ ಮಾಡಿದೆ. ಆ ನಂತರ ನಡೆದಿದ್ದೇ ಮಾತ್ರ ಊಹಿಸಲು ಅಸಾಧ್ಯ. ಹೌದು, ಬಬೂನ್‌ಗಳು ಆ ದೊಡ್ಡ ಚಿರತೆಯನ್ನು ಓಡಿಸಿ ಪ್ರವಾಸಿಗರನ್ನು ಆಕರ್ಷಿಸಿದವು. ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಅದು ವೈರಲ್ ಆಗಿದೆ.
ಈ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ 'ಲೇಟೆಸ್ಟ್ ಸೈಟಿಂಗ್ಸ್' ನಲ್ಲಿಯೂ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಚಿರತೆಯೊಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ನಂತರ ಹುಲ್ಲಿನ ಪ್ರದೇಶದಲ್ಲಿ ಮರೆಯಾಗಿ ನಿಂತಿದೆ. ಇದ್ದಕ್ಕಿದ್ದಂತೆ, ಆ ಚಿರತೆ ಬಬೂನ್ ಗುಂಪಿನ ಮೇಲೆ ದಾಳಿ ಮಾಡುತ್ತದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿದ್ದ ಬಬೂನ್‌ಗಳು ಚಿರತೆಯನ್ನು ಸುಲಭವಾಗಿ ಸೋಲಿಸುತ್ತವೆ. ಬಬೂನ್‌ಗಳಿಂದ ರಕ್ಷಿಸಿಕೊಳ್ಳಲು ಸ್ವಲ್ಪ ಸಮಯದ ನಂತರ, ಚಿರತೆ ಅಲ್ಲಿಂದ ಓಡಿ ಹೋಗುತ್ತದೆ.
ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಬಬೂನ್‌ಗಳಿಂದ ಪ್ರಭಾವಿತರಾಗಿದ್ದಾರೆ. ಪ್ರಾಣಿಗಳು ಪರಸ್ಪರರ ರಕ್ಷಣೆಗಾಗಿ ತೋರಿದ ಏಕತೆಯನ್ನು ಪ್ರೀತಿಸಿದ್ದಾರೆ. ವಿಡಿಯೋವನ್ನು ಆಗಸ್ಟ್ 15 ರಂದು ಪೋಸ್ಟ್ ಮಾಡಲಾಗಿದ್ದು, 180 ಸಾವಿರ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ನೆಟ್ಟಿಗರು ಒಂದೊಂದು ರೀತಿಯಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಬಬೂನ್ ಎಲ್ಲರ ಪ್ರಶಂಸೆಗೆ ಅರ್ಹವಾಗಿವೆ. "ಓರ್ವ ಬಳಕೆದಾರರಂತೂ ನಾನು ಚಿರತೆಗಳನ್ನು ಪ್ರೀತಿಸುತ್ತೇನೆ. ಆದರೆ ಬಬೂನ್ ಟೀಮ್‌ವರ್ಕ್ ಮತ್ತು ಚಿರತೆಯ ಪ್ರದರ್ಶನ ಅದ್ಭುತವಾಗಿತ್ತು'' ಎಂದು ಪ್ರಶಂಸಿಸಿದ್ದಾರೆ.