ನಾವು ಯಾವುದೆ ಕೆಲಸವನ್ನಾದರೂ ಆಸಕ್ತಿಯಿಂದ ಮಾಡುತ್ತಿರುತ್ತೇವೆ. ಆದರೆ ಅಪಾಯ ಯಾವ ಕಡೆಯಿಂದ ಬರುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ (Viral Video) ಆಗುತ್ತಿದೆ. ಆ ವಿಡಿಯೋದಲ್ಲಿ ರಸ್ತೆ ಬದಿಯ ಪಂಕ್ಚರ್ ಅಂಗಡಿಯಲ್ಲಿನ ಮೆಕ್ಯಾನಿಕ್ ಬಸ್ ಟೈರ್ ಅನ್ನು ಪರಿಶೀಲಿಸುವುದು ಮತ್ತು ಸರಿಪಡಿಸುವುದನ್ನು ಕಾಣಬಹುದು.
ವೈರಲ್ ವಿಡಿಯೋದಲ್ಲಿ ಶಾಲಾ ಬಸ್ ಅಂಗಡಿಯ ಮುಂದೆ ನಿಂತಿರುವುದನ್ನು ಕಾಣಬಹುದು. ಯುವಕನೊಬ್ಬ ಬಸ್ಸಿನ ಟೈರ್ ರಿಪೇರಿ ಮಾಡಿ ಗಾಳಿ ತುಂಬುತ್ತಿದ್ದಾನೆ. ಗಾಳಿ ತುಂಬಿದ ನಂತರ ಅಲ್ಲಿಂದ ದೂರ ಸರಿಯಲು ಹೋಗುವುದನ್ನು ನೀವು ನೋಡಬಹುದು. ಆದರೆ ಅಷ್ಟರಲ್ಲಾಗಲೇ ಟೈರ್ ಸಿಡಿಯುತ್ತದೆ. ಅದರ ಸ್ಫೋಟವು ಎಷ್ಟು ಎಷ್ಟು ಶಕ್ತಿಯುತವಾಗಿದೆಯೆಂದರೆ ಹೊಗೆಯ ಮೋಡದ ಜತೆಗೆ ಆ ವ್ಯಕ್ತಿಯು ಕೆಲವು ಇಂಚುಗಳಷ್ಟು ಎತ್ತರದಲ್ಲಿ ಗಾಳಿಯಲ್ಲಿ ಪಲ್ಟಿ ಹೊಡೆಯುತ್ತಾನೆ. ಬಳಿಕ ದಡಂ ಎಂದು ನೆಲದ ಮೇಲೆ ಬೀಳುವುದನ್ನು ಕಾಣಬಹುದು.
ಉಡುಪಿ ಜಿಲ್ಲೆಯ ಕುಂದಾಪುರ ಬಳಿಯ ಪಂಕ್ಚರ್ ಅಂಗಡಿಯಲ್ಲಿ ಗಾಳಿ ತುಂಬುವಾಗ ಟೈರ್ ಒಡೆದು ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೋಟೇಶ್ವರದಲ್ಲಿ ಘಟನೆ ನಡೆದಿದೆ ಎಂದು ಶೀರ್ಷಿಕೆಯಲ್ಲಿ ಬರೆದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಶಬ್ದ ಕೇಳಿದ ಜನರು ಆತನ ಸಹಾಯಕ್ಕೆ ಓಡಿಬಂದು ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು ಎನ್ನಲಾಗಿದೆ. ಅಪಘಾತದಲ್ಲಿ ಮೆಕ್ಯಾನಿಕ್ ಕೈಗೆ ಗಾಯವಾಗಿದೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ಅಬ್ದುಲ್ ರಶೀದ್ (19)ಎಂದು ಗುರುತಿಸಲಾಗಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಈ ಘಟನೆ ಡಿಸೆಂಬರ್ 21 ರಂದು ಬೆಳಗ್ಗೆ 10.11ಕ್ಕೆ ಸಂಭವಿಸಿದೆ.