ನ್ಯೂಸ್

ಹಿಂದೂಗಳಿಂದ ಸರಕು ಖರೀದಿಸದಂತೆ ಮುಸ್ಲಿಂ ವ್ಯಕ್ತಿಯ ಭಾಷಣ; ವಿಡಿಯೋ ಅಸಲಿಯತ್ತನ್ನು ಬಯಲು ಮಾಡಿದ ಪೊಲೀಸರು

ಬೆಂಗಳೂರು: ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂಗಳಿಂದ ಸರಕುಗಳನ್ನು ಖರೀದಿಸದಂತೆ ಭಾಷಣ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಘಟನೆಯೂ ಬೆಂಗಳೂರಿನಲ್ಲಿ ನಡೆದಿರುವಂತೆ ಬಿಂಬಿಸಲಾಗಿತ್ತು.

ವಿಡಿಯೋದ ಅಸಲಿಯತ್ತಿನ ಬಗ್ಗೆ ಫ್ಯಾಕ್ಟ್​ಚೆಕ್​ ಮಾಡಿರುವ ಕರ್ನಾಟಕ ಪೊಲೀಸರು ನಿಜಾಂಶವನ್ನು ಬಯಲು ಮಾಡಿದ್ದಾರೆ. ಅಸಲಿಗೆ ಆ ಘಟನೆಯೂ ನಡೆದಿರುವುದು ರಾಜಸ್ಥಾನದ ಬಾರ್ಮೆರ್​ ಜಿಲ್ಲೆಯಲ್ಲಿ ಎಂದು ತಿಳಿದು ಬಂದಿದೆ.

ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ

2019ರ ಜೂನ್​ ತಿಂಗಳಲ್ಲಿ ರಾಜಸ್ಥಾನದ ಬಾರ್ಮೆರ್​ ಜಿಲ್ಲೆಯ ಬೊಜಾರಿಯಾ ಎಂಬ ಹಳ್ಳಿಯ ಬಳಿ ಇರುವ ಪೆಟ್ರೋಲ್​ ಬಂಕ್​ ಖಾಸಗಿ ಬಸ್​ ಅಪಘಾತವಾಗಿತ್ತು. ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದರು.

ಮೃತನ ಕುಟುಂಬಸ್ಥರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ವ್ಯಕ್ತಿಯೋರ್ವ ಭಾಷಣ ಮಾಡಿದ್ದ, ಈ ಸಂಬಂಧ ಬಾರ್ಮೆರ್​ ಪೊಲೀಸರು ಈಗಾಗಲೇ ಆತನ ವಿರುದ್ಧ ಕ್ರಮವನ್ನು ಜರುಗಿಸಿದ್ದಾರೆ. ಫ್ಯಾಕ್ಟ್​ಚೆಕ್​ ವೇಳೆ ಬಾರ್ಮೆರ್​ ಪೊಲೀಸರಿಂದ ಈ ಕುರಿತು ಟ್ವೀಟ್​ ಮಾಡಲಾಗಿದ್ದು, ನಿಜಾಂಶ ಬಯಲಾಗಿದೆ.

ಪ್ರಸ್ತುತ ವೈರಲ್​ ಆಗಿರುವ ವಿಡಿಯೋ ಬೆಂಗಳೂರು ಅಥವಾ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ. ಈ ರೀತಿಯ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಪೊಲೀಸರು ಸೂಚನೆ ನೀಡಿದ್ಧಾರೆ.