ಕರೊನಾ ವೈರಸ್ನಿಂದ ಅತಿ ಹೆಚ್ಚು ಬಾಧಿತವಾದ ರಾಷ್ಟ್ರಗಳಲ್ಲಿ ಇಟಲಿ ಮುಂಚೂಣಿಯಲ್ಲಿದೆ. ಅಲ್ಲಿ ಲಾಕ್ಡೌನ್ ಆಗಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೆ ಎಲ್ಲೆಂದರಲ್ಲಿ ಜನರು ಓಡಾಡಿದ ಪರಿಣಾಮ ಕರೊನಾ ಪರಿಸ್ಥಿತಿ ಕೈಮೀರಿ ಹೋಗಿದೆ. ಅಲ್ಲಿ ಕರೊನಾ ಸೋಂಕಿನಿಂದ ಬರೋಬ್ಬರಿ 11,591 ಮಂದಿ ಮೃತಪಟ್ಟಿದ್ದಾರೆ. ಸೋಮವಾರ ಒಂದೇ ದಿನ 812 ಜನರು ಬಲಿಯಾಗಿದ್ದಾರೆ.
ಇಟಲಿಯಲ್ಲಿ ಕರೊನಾ ವೈರಸ್ ಗಂಭೀರತೆ ಹೆಚ್ಚುತ್ತಿರುವ ಬೆನ್ನಲ್ಲೇ ಎರಡು ಫೋಟೋಗಳು ಫೇಸ್ಬುಕ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದವು. ರಸ್ತೆಗಳ ತುಂಬ ಕರೆನ್ಸಿ ನೋಟುಗಳು ಬಿದ್ದು ಹಾಸಿರುವ ಎರಡು ಪೋಟೋಗಳು ಅನೇಕರ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಪೋಸ್ಟ್ ಆಗಿದ್ದವು.
ಫೇಸ್ಬುಕ್ ಬಳಕೆದಾರರೋರ್ವರಾದ ಮನೀಶ್ ಧವನ್ ಎಂಬುವರು ರಸ್ತೆ ತುಂಬ ಹಣ ಬಿದ್ದಿರುವ ಫೋಟೋಗಳನ್ನು ಪೋಸ್ಟ್ ಮಾಡಿ, ಇಟಲಿಯ ಜನರು ತಮ್ಮಲ್ಲಿರುವ ಹಣವನ್ನು ಹೀಗೆ ರಸ್ತೆ ಮೇಲೆ ಬೇಕಾಬಿಟ್ಟಿ ಎಸೆಯುತ್ತಿದ್ದಾರೆ. ಈ ಹಣದಿಂದ ನಮಗೆ ಪ್ರಯೋಜನ ಇಲ್ಲ ಎಂದಮೇಲೆ ಅದನ್ನು ನಾವಿಟ್ಟುಕೊಂಡು ಏನು ಮಾಡುವುದು ಎನ್ನುತ್ತಿದ್ದಾರೆ ಎಂದು ಕ್ಯಾಪ್ಷನ್ ಬರೆದಿದ್ದರು.
ಅಂದರೆ ಕರೊನಾ ವೈರಸ್ನಿಂದ ಇಷ್ಟೊಂದು ಸಾವಾಗುತ್ತಿರುವಾಗ ಹಣ ಯಾವುದೇ ಉಪಯೋಗಕ್ಕೂ ಬರುತ್ತಿಲ್ಲ. ಹಾಗಾಗಿ ರಸ್ತೆ ಮೇಲೆ ಬಿಸಾಕುತ್ತಿದ್ದಾರೆ ಎಂದು ಪ್ರತಿಪಾದಿಸಲಾಗಿತ್ತು.
ಆದರೆ ಇಂಡಿಯಾ ಟುಡೆ ತಂಡ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಇದೊಂದು ಶುದ್ಧ ಸುಳ್ಳಿನ ಸುದ್ದಿ ಎಂಬುದು ಗೊತ್ತಾಗಿದೆ. ರಸ್ತೆ ಮೇಲೆ ಕರೆನ್ಸಿ ನೋಟುಗಳು ಬಿದ್ದಿರುವ ಈ ಫೋಟೋ ಇಟಲಿಯದ್ದು ಅಲ್ಲವೇ ಅಲ್ಲ. ದಕ್ಷಿಣ ಅಮೆರಿಕ ಖಂಡದ ಉತ್ತರ ಕರಾವಳಿ ಭಾಗದಲ್ಲಿರುವ ವೆನೆಜುವೆಲಾ ದೇಶದ್ದು ಎಂಬ ವಿಷಯ ಬೆಳಕಿಗೆ ಬಂದಿದೆ. ಅದೂ ಕೂಡ ಒಂದು ವರ್ಷ ಹಳೆಯದ್ದು.
ಫೋಟೋಗಳನ್ನು ಗೂಗಲ್ ರಿವರ್ಸ್ ಸರ್ಚ್ಗೆ ಕೊಟ್ಟಾಗ ಇವು 2019ರ ಮಾರ್ಚ್ನಲ್ಲಿಯೇ ಇಂಟರ್ನೆಟ್ನಲ್ಲಿ ವೈರಲ್ ಆಗಿವೆ ಎಂಬುದು ಸ್ಪಷ್ಟವಾಗಿದೆ. ಆದರೆ ಈಗ ಕರೊನಾ ವೈರಸ್ ಹುಟ್ಟಿಕೊಂಡ ಸಂದರ್ಭದಲ್ಲಿ ಅದನ್ನು ಇಟಲಿಗೆ ಹೊಂದಿಸಿ ಮತ್ತೆ ವೈರಲ್ ಮಾಡಲಾಗುತ್ತಿದೆ.
ರಸ್ತೆ ಮೇಲೆ ಬಿದ್ದಿರುವ ಕರೆನ್ಸಿಗಳು ವೆನೆಜುವೆಲಾದ ಬೊಲಿವಾರ್ ಫ್ಯುರ್ಟೆ ಎಂಬ ಹೆಸರಿನ ಹಳೇ ನೋಟುಗಳು. 2018ರ ಆಗಸ್ಟ್ನಲ್ಲಿ ಬೊಲಿವಾರ್ ಫ್ಯುರ್ಟೆ ಕರೆನ್ಸಿಯನ್ನು ರದ್ದುಗೊಳಿಸಿ ಅದರ ಬದಲಿಗೆ ಬೊಲಿವಾರ್ ಸೊಬೆರಾನೊ ಎಂಬ ಹೊಸ ನೋಟುಗಳನ್ನು ಪರಿಚಯಿಸಲಾಯಿತು. ಆ ಸಮಯದಲ್ಲಿ ವೆನೆಜುವೆಲಾ ದೇಶದ ಅನೇಕ ಜನರು ತಮ್ಮ ಬಳಿ ಇದ್ದ ಹಳೇ ನೋಟುಗಳನ್ನು ಹೀಗೆ ರಸ್ತೆ ಮೇಲೆ ಎಸೆದಿದ್ದರು. ಅದು ಕೋಪವೋ, ಹತಾಶೆಯೋ ಗೊತ್ತಿಲ್ಲ. ಆದರೆ ಹಳೇ ನೋಟುಗಳಿಗೆ ಬೆಲೆಯಿಲ್ಲ ಎಂದಾದಮೇಲೆ ಅದನ್ನಿಟ್ಟುಕೊಂಡು ಮಾಡುವುದೇನು ಎಂಬ ಕಾರಣಕ್ಕೆ ಹೀಗೆ ರೋಡ್ಗಳಲ್ಲಿ ಬಿಸಾಕಿದ್ದರು ಎಂದು ಫ್ಯಾಕ್ಟ್ಚೆಕ್ ವೆಬ್ಸೈಟ್ ಸ್ನೋಪ್ಸ್ (Snopes) ವರದಿ ಮಾಡಿದೆ.
ಹಾಗೇ ನೋಟು ರದ್ದಾದ ಸಮಯದಲ್ಲಿ ವೆನೆಜುವೆಲಾದ ಕೆಲವರು ಬ್ಯಾಂಕ್ವೊಂದನ್ನು ಲೂಟಿ ಮಾಡಿ, ಅಲ್ಲಿಂದ ಹಳೇ ನೋಟುಗಳನ್ನು ತಂದು ಸುಟ್ಟಿದ್ದ ಘಟನೆಯೂ ನಡೆದಿತ್ತು. ಆ ಸಮಯದಲ್ಲಿ ಅಲ್ಲಿನ ಅನೇಕ ಪತ್ರಕರ್ತರು ಅದನ್ನು ಟ್ವೀಟ್ ಮಾಡಿಕೊಂಡಿದ್ದರು ಎಂಬುದು ಇಂಡಿಯಾ ಟುಡೆಯ ಫ್ಯಾಕ್ಟ್ಚೆಕ್ನಲ್ಲಿ ಬಯಲಾಗಿದೆ. (ಏಜೆನ್ಸೀಸ್)