ನ್ಯೂಸ್

ಸಂಚಾರ ನಿಯಮಗಳನ್ನು ಪಾಲಿಸದೇ, ಬೇರೆ ದಾರಿ ಹುಡುಕುವವರೇ ಹೆಚ್ಚು, ಆದರೆ ಈತ ಮಾಡಿದ್ದು ಮಾತ್ರ ಎಲ್ಲರಿಗೂ ಹೊಳೆಯುವಂತದ್ದಲ್ಲ!

ನವದೆಹಲಿ: ವಾಹನ ಚಲಾಯಿಸುವಾಗ ಟ್ರಾಫಿಕ್​ ರೂಲ್ಸ್​ಗಳನ್ನು ಅನುಸರಿಸುವುದಕ್ಕಿಂತ ಅವುಗಳನ್ನು ಬಿಟ್ಟು ಬೇರೆ ಮಾಡುವುದೇ ನಮಗೆಲ್ಲ ರೂಢಿ.

ಇಲ್ಲೊಬ್ಬಾತ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ತನ್ನ ಕಾರಿನ ಮುಂದಿನ ಸೀಟಿನಲ್ಲಿ ಈತ ಕೂರಿಸಿಕೊಂಡಿದ್ದು ಒಂದು ನಕಲಿ ಅಸ್ಥಿಪಂಜರವನ್ನು!

ಏಕೆಂದರೆ, ಒಬ್ಬರಿಗಿಂತ ಹೆಚ್ಚು ಪ್ರಯಾಣಿಕರು ಇರುವ ದಾರಿಯಲ್ಲಿ ತನ್ನ ಕಾರಿಗೆ ಬೇಗ ದಾರಿ ಸಿಗಲಿ ಎಂದು. ಇಂತಹವನ್ನು ಹೈ ಆಕ್ಯುಪೆನ್ಸಿ ವೆಹಿಕಲ್​ (ಎಚ್​ಒವಿ) ದಾರಿಗಳು ಎನ್ನುತ್ತಾರೆ. ಈ ದಾರಿಯನ್ನು ಒಂದಕ್ಕಿಂತ ಹೆಚ್ಚು ಪ್ರಯಾಣಿಕರು ಇರುವ ವಾಹನಗಳಿಗೆ ಮಾತ್ರ ಮೀಸಲಿಟ್ಟಿರುತ್ತಾರೆ.

ಅಂದಹಾಗೆ ಇಂತಹ ಒಂದು ಘಟನೆ ನಡೆದಿದ್ದು ಅಮೆರಿಕದ ಅರಿಝೋನಾ ಎಂಬಲ್ಲಿ. ಈ ಘಟನೆಯ ಒಂದು ಫೋಟೋವನ್ನು ಸಾರ್ವಜನಿಕ ಸುರಕ್ಷತಾ ಇಲಾಖೆ ಹಂಚಿಕೊಂಡಿದೆ. ಇದಕ್ಕೆ ಅಪಾರ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಅಸ್ಥಿಪಂಜರವನ್ನು ಮುಂದಿನ ಸೀಟ್​ಗೆ ಹಗ್ಗದಿಂದ ಕಟ್ಟಿ ಹಾಕಿದ್ದ. ಅಲ್ಲದೆ ಅದಕ್ಕೆ ಒಂದು ಟೊಪ್ಪಿ ಹಾಕಿ ಯಾರೋ ಕುಳಿತಿದ್ದಾರೆ ಎನಿಸುವಂತೆ ಮಾಡಿದ್ದ.

ಇಂತಹ ಫೋಟೋವನ್ನು ಹಂಚಿಕೊಂಡ ಸಾರ್ವಜನಿಕ ಸುರಕ್ಷತಾ ಇಲಾಖೆ, "ನೀವು ಈ ರೀತಿ ಮಾಡಿ ಎಚ್​ಒವಿ ದಾರಿಯನ್ನು ಬಳಸಲು ಯೋಚನೆ ಮಾಡಿದ್ದರೆ ಬಿಟ್ಟುಬಿಡಿ. ಏಕೆಂದರೆ ನಮ್ಮ ಇಲಾಖೆಯವರು ಈ ತರಹ ಮಾಡಿದ 62 ವರ್ಷದ ವ್ಯಕ್ತಿಗೆ ದಂಡ ವಿಧಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ." ಇದಕ್ಕೆ ನೆಟ್ಟಿಗರು ವಿಧವಿಧವಾಗಿ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)