ನ್ಯೂಸ್

ಟೀಂ ಇಂಡಿಯಾ ಅಭಿಮಾನಿಗಳ ಮೇಲೆ ಹಲ್ಲೆ ನಡೆಸಿದ ಲಂಕಾ ಫ್ಯಾನ್ಸ್!

ಕೊಲಂಬೊ: ಏಷ್ಯಾಕಪ್​ನ(Asia Cup 2023) ಮಂಗಳವಾರದ ಸೂಪರ್​ 4(India vs Sri Lanka Super Fours) ಪಂದ್ಯದಲ್ಲಿ ಭಾರತ ಮತ್ತು ಹಾಲಿ ಚಾಂಪಿಯನ್​ ಶ್ರೀಲಂಕಾ(IND vs SL) ವಿರುದ್ಧ 41 ರನ್​ಗಳ ಗೆಲುವು ಸಾಧಿಸಿದೆ. ಇದರೊಂದಿಗೆ ಮೊದಲ ತಂಡವಾಗಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ. ಇಲ್ಲಿನ ಪ್ರೇಮದಾಸ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ ಟೀಮ್ ಇಂಡಿಯಾ ಲಂಕಾ ಸ್ಪಿನ್ನರ್​ಗಳ ದಾಳಿಗೆ ಸಿಲುಕಿ 49.2 ಓವರ್​ಗಳಲ್ಲಿ 213 ರನ್​ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಂಕಾ ತಂಡ 41. 3 ಓವರ್​ಗಳಲ್ಲಿ 172 ರನ್​ಗಳಿಗೆ ಆಲ್​ಔಟ್​ ಆಗಿ ಸೋಲೊಪ್ಪಿಕೊಂಡಿತು.


ಸಣ್ಣ ಮೊತ್ತದ ಗುರಿಯನ್ನು ಬೆನ್ನಟ್ಟಲು ಹೊರಟ ಸ್ಥಳೀಯ ತಂಡ ಶ್ರೀಲಂಕಾ ಭಾರತದ ಬೌಲರ್​ಗಳ ಒತ್ತಡಕ್ಕೆ ಒಳಗಾಯಿತು. ಸತತವಾಗಿ ವಿಕೆಟ್ ಕಳೆದುಕೊಂಡು 171 ರನ್​ಗಳಿಗೆ ಸರ್ವಪತನ ಕಂಡಿತು.


ಟೀಂ ಇಂಡಿಯಾದೆದುರಿನ ಹೀನಾಯ ಸೋಲನ್ನು ಅರಗಿಸಿಕೊಳ್ಳಲಾಗದ ಶ್ರೀಲಂಕಾ ಕ್ರಿಕೆಟ್ ತಂಡದ ಅಭಿಮಾನಿಗಳು ಕ್ರೀಡಾಂಗಣದಲ್ಲಿ ನೆರೆದಿದ್ದ ಟೀಂ ಇಂಡಿಯಾದ ಅಭಿಮಾನಿಗಳ ಮೇಲೆ ಹಲ್ಲೆ ಮಾಡಿರುವ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.


ಭಾರತಕ್ಕೆ 41 ರನ್​ಗಳ ಗೆಲುವು ದೊರೆತಿದಲ್ಲದೆ, ತಂಡ ನೇರವಾಗಿ ಫೈನಲ್ ಪ್ರವೇಶಿಸಿತು. ಈ ವೇಳೆ ತನ್ನ ತಂಡದ ಸೋಲನ್ನು ಅಗರಿಸಿಕೊಳ್ಳದ ಲಂಕಾ ಅಭಿಮಾನಿಗಳು ಭಾರತದ ಅಭಿಮಾನಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.


ವೈರಲ್ ಆಗಿರುವ ವಿಡಿಯೋದಲ್ಲಿ ಶ್ರೀಲಂಕಾದ ಕೆಲವು ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕುಳಿತಿದ್ದ ಭಾರತೀಯ ಅಭಿಮಾನಿಗಳನ್ನು ಥಳಿಸುವುದನ್ನು ಕಾಣಬಹುದಾಗಿದೆ. ಶ್ರೀಲಂಕಾದ ಅಭಿಮಾನಿಯೊಬ್ಬರು ಮೊದಲು ಭಾರತೀಯ ಅಭಿಮಾನಿಯನ್ನು ನಿಂದಿಸಿ ನಂತರ ಕಪಾಳಮೋಕ್ಷ ಮಾಡಿ ಗುದ್ದಿದ್ದಾನೆ.
ಕೊಲಂಬೊದ ಕ್ರೀಡಾಂಗಣದಲ್ಲಿ ಕುಳಿತಿದ್ದ ಇತರ ಅಭಿಮಾನಿಗಳು ಆರೋಪಿ ಯುವಕನನ್ನು ತಡೆಯಲು ಪ್ರಯತ್ನಿಸಿದರಾದರೂ ಆತ ತಂಡ ಸೋತ ಬೇಸರದಲ್ಲಿ ಅಭಿಮಾನಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.