ನ್ಯೂಸ್

Elon Musk on Anti Immigration Rally | ಹೋರಾಡಿ ಇಲ್ಲವೇ ಸಾಯಿರಿ..ಯುಕೆ ಸರ್ಕಾರದ ಬದಲಾವಣೆಗೆ ಕರೆ ನೀಡಿದ ಎಲಾನ್​​ ಮಸ್ಕ್​​

Elon Musk on Anti Immigration Rally: ಲಂಡನ್​​​ ವಿನಾಶದ ಅಂಚಿನಲ್ಲಿದ್ದು, ಬ್ರಿಟನ್ನರು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು ಇಲ್ಲವೇ ಸಾಯಬೇಕು ಎಂದು ಉದ್ಯಮಿ ಎಲಾನ್​​ ಮಸ್ಕ್​ ಎಚ್ಚರಿಕೆ ನೀಡಿದ್ದಾರೆ.

ಲಂಡನ್‌ನಲ್ಲಿ ಬಲಪಂಥೀಯ ವ್ಯಕ್ತಿ ಟಾಮಿ ರಾಬಿನ್ಸನ್ ಆಯೋಜಿಸಿದ್ದ ವಲಸೆ ವಿರೋಧಿ ಪ್ರತಿಭಟನೆಯಲ್ಲಿ ವರ್ಚುವಲ್ ಆಗಿ ಪಾಲ್ಗೊಂಡು ಮಾತನಾಡಿದ ಮಸ್ಕ್, ಯುಕೆಯಲ್ಲಿನ ಸರ್ಕಾರದ ಬದಲಾವಣೆಗೆ ಕರೆ ನೀಡಿದರು.

ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಸರ್ಕಾರ ಬೇರೆ ದೇಶದ ಮತದಾರರನ್ನು ಆಮದು ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದು, ಇಲ್ಲಿನ ಜನ ಅವರಿಗೆ ಮತ ನೀಡದಿದ್ದರೆ, ಅವರು ಇತರ ರಾಷ್ಟ್ರಗಳಿಂದ ಜನರನ್ನು ಕರೆಸಿ ಅವರಿಂದ ಮತ ಪಡೆದು ಆಯ್ಕೆಯಾಗುತ್ತಾರೆ, ಇದನ್ನು ಪ್ರಾರಂಭದಲ್ಲಿಯೇ ತಡೆಯದಿದ್ದರೆ ಅವರ ತಂತ್ರ ಯಶಸ್ವಿಯಾಗುತ್ತದೆ ಎಂದರು. ನೀವೂ ಹಿಂಸೆಯನ್ನು ಆಯ್ಕೆ ಮಾಡಿಕೊಳ್ಳಿ, ಮಾಡಿಕೊಳ್ಳದಿರಿ, ಆದರೆ ಹಿಂಸೆ ನಿಮ್ಮನ್ನು ಹುಡುಕಿಕೊಂಡು ಬಂದೆ ಬರುತ್ತದೆ, ಆಗ ಬೇರೆ ಆಯ್ಕೆ ಇರುವುದಿಲ್ಲ, ನೀವು ಪ್ರತಿದಾಳಿ ನಡೆಸಬೇಕು ಅಥವಾ ಸಾಯಬೇಕು ಇದೇ ಸತ್ಯ ಎಂದು ಹೇಳಿದರು.

ಚಾರ್ಲಿ ಕಿರ್ಕ್​​ ಹತ್ಯೆ ಉಲ್ಲೇಖ

ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಟ್ರಂಪ್​​ ಆಪ್ತ ಚಾರ್ಲಿ ಕಿರ್ಕ್ ಹತ್ಯೆಯನ್ನು ಉಲ್ಲೇಖಿಸಿದ ಮಸ್ಕ್, ಎಡಪಂಥೀಯ ರಾಜಕೀಯ ಪಕ್ಷಗಳು ಹಿಂಸಾಚಾರವನ್ನೇ ಆಶ್ರಯವನ್ನಾಗಿಟ್ಟುಕೊಂಡಿವೆ, ಅವರಲ್ಲಿ ತುಂಬಾ ಹಿಂಸಾಚಾರ ನಡೆಯುತ್ತಿದೆ, ಅದನ್ನು ಅವರು ಬಹಿರಂಗವಾಗಿ ಆಚರಿಸುತ್ತಿದ್ದಾರೆ ಎಂದರು. ಶನಿವಾರ (ಸೆ 13) ಬಲಪಂಥೀಯ ಕಾರ್ಯಕರ್ತ ಟಾಮಿ ರಾಬಿನ್ಸನ್ ನೇತೃತ್ವದಲ್ಲಿ ಲಂಡನ್​​ನಲ್ಲಿ ನಡೆದ ಮೆರವಣಿಗೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು, ರಾಬಿನ್ಸನ್ ಬೆಂಬಲಿಗರ ಗುಂಪು ಪೊಲೀಸರೊಂದಿಗೆ ಘರ್ಷಣೆ ನಡೆಸಿತು. ಟ್ರೋಪಾಲಿಟನ್ ಪೊಲೀಸರ ಪ್ರಕಾರ, ಯುನೈಟ್ ದಿ ಕಿಂಗ್‌ಡಮ್ ರ‍್ಯಾಲಿಯಲ್ಲಿ ಬಾಟಲ್​​ ಎಸೆತದಿಂದ ಹಲವಾರು ಅಧಿಕಾರಿಗಳಿಗೆ ಗಾಯವಾಗಿದ್ದು, ಅವರನ್ನೆಲ್ಲಾ ಗುದ್ದಲಾಯಿತು, ಒದೆಯಲಾಯಿತು ಮತ್ತು ಹೊಡೆದರು ಎಂದು ವರದಿಯಾಗಿದೆ.

ಒಟ್ಟಾರೆಯಾಗಿ, 26 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ, ಅದರಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ, ಹಲ್ಲುಗಳು, ಮೂಗು ಮುರಿದಿರುವ ಸಾಧ್ಯತೆ ಮತ್ತು ಬೆನ್ನುಮೂಳೆಯ ಗಾಯವಾಗಿದೆ ಎಂದು ವರದಿಯಾಗಿದೆ. ಹಿಂಸಾತ್ಮಕ ಅವ್ಯವಸ್ಥೆ, ಹಲ್ಲೆ ಮತ್ತು ಕ್ರಿಮಿನಲ್ ಹಾನಿ ಸೇರಿದಂತೆ ಕನಿಷ್ಠ 25 ಜನರನ್ನು ಬಂಧಿಸಲಾಗಿದೆ ಮತ್ತು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​​)