Army Takes Charge: ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ನಿಷೇಧದಿಂದ ಶುರುವಾದ ಪ್ರತಿಭಟನೆ ಹಿಂಸಾಚಾರ ನಡೆದು ಸಾವು-ನೋವು ಉಂಟಾಗಿದ್ದು, ಹಾಲಿ ಕೆ.ಪಿ.ಓಲಿ ನೇತೃತ್ವದ ಸರ್ಕಾರ ಪತನಗೊಂಡಿದೆ. ಸದ್ಯ ಹೊಸ ಸರ್ಕಾರ ರಚನೆಯಾಗುವವರೆಗೂ ನೇಪಾಳ ಸೇನೆ ಮುಖ್ಯಸ್ಥರು ಆಡಳಿತವನ್ನು ವಹಿಸಿಕೊಂಡಿದ್ದಾರೆ ಎಂದು ಬುಧವಾರ (ಸೆ. 10) ವರದಿಯಾಗಿದೆ.
ಕಳೆದ ವರ್ಷ ಸೇನಾ ಮುಖ್ಯಸ್ಥ ಹುದ್ದೆಯನ್ನು ವಹಿಸಿಕೊಂಡಿದ್ದ 58 ವರ್ಷದ ಜನರಲ್ ಅಶೋಕ್ ರಾಜ್ ಸಿಗ್ಡೆಲ್ ನೇಪಾಳದ ಆಡಳಿತ ವಹಿಸಿಕೊಂಡಿದ್ದಾರೆ. ಹಾಗೆಯೇ ದೇಶಾದ್ಯಂತ ಕರ್ಫ್ಯೂ ವಿಧಿಸಲಾಗಿದ್ದು, ವಿಧ್ವಂಸಕ ಕೃತ್ಯ, ಲೂಟಿ ಅಥವಾ ವ್ಯಕ್ತಿಗಳ ಮೇಲೆ ದಾಳಿಯ ಘಟನೆಗಳು ನಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಸೇನೆ ಮಾಹಿತಿ ನೀಡಿದೆ.
ನಿನ್ನೆ ರಾತ್ರಿ ದೂರದರ್ಶನದ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿರುವ ಜನರಲ್ ಅಶೋಕ್ ರಾಜ್ ಸಿಗ್ಡೆಲ್, ಪ್ರತಿಭಟನಾ ಕಾರ್ಯಕ್ರಮಗಳನ್ನು ನಿಲ್ಲಿಸಿ, ರಾಷ್ಟ್ರದ ಶಾಂತಿಯುತ ಪರಿಹಾರಕ್ಕಾಗಿ ಸಂವಾದಕ್ಕೆ ಮುಂದೆ ಬರುವಂತೆ ನಾವು ಪ್ರತಿಭಟನಾ ಗುಂಪಿಗೆ ಮನವಿ ಮಾಡುತ್ತೇವೆ. ಪ್ರಸ್ತುತ ಕಷ್ಟಕರ ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಬೇಕು. ನಮ್ಮ ಐತಿಹಾಸಿಕ ಮತ್ತು ರಾಷ್ಟ್ರೀಯ ಪರಂಪರೆ, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಯನ್ನು ರಕ್ಷಿಸಬೇಕು. ಸಾರ್ವಜನಿಕರು ಮತ್ತು ರಾಜತಾಂತ್ರಿಕ ಕಾರ್ಯಾಚರಣೆಗಳಿಗೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 8 ರಂದು ಪ್ರಾರಂಭವಾದ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಅವರು, ನೇಪಾಳದ ಇತಿಹಾಸದ ಆರಂಭದಿಂದಲೂ, ನೇಪಾಳ ಸೇನೆಯು ಕಠಿಣ ಸಂದರ್ಭಗಳಲ್ಲಿಯೂ ನೇಪಾಳದ ಸ್ವಾತಂತ್ರ್ಯ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ, ಸ್ವಾತಂತ್ರ್ಯ, ರಾಷ್ಟ್ರೀಯ ಏಕತೆ ಮತ್ತು ನೇಪಾಳಿ ಜನರ ಸುರಕ್ಷತೆಯನ್ನು ಕಾಪಾಡಲು ಬದ್ಧವಾಗಿದೆ. ಕೆಲವು ಗುಂಪುಗಳು ಕಠಿಣ ಪರಿಸ್ಥಿತಿಯ ಅನಗತ್ಯ ಲಾಭವನ್ನು ಪಡೆದುಕೊಂಡು ಸಾಮಾನ್ಯ ನಾಗರಿಕರು ಮತ್ತು ಸಾರ್ವಜನಿಕ ಆಸ್ತಿಗೆ ತೀವ್ರ ಹಾನಿಯನ್ನುಂಟುಮಾಡುತ್ತಿವೆ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧದ ಸರ್ಕಾರಿ ವಿರೋಧಿ ಪ್ರತಿಭಟನೆಯು ಭ್ರಷ್ಟಾಚಾರ ಮತ್ತು ಸರ್ಕಾರದಲ್ಲಿನ ಪಾರದರ್ಶಕತೆಯ ಕೊರತೆಯ ವಿರುದ್ಧದ ಸಂಪೂರ್ಣ ಚಳುವಳಿಯಾಗಿ ಮಾರ್ಪಟ್ಟ ನಂತರ ಕಳೆದ ಎರಡು ದಿನಗಳಿಂದ ನೇಪಾಳ ಬೀದಿಗಳಲ್ಲಿ ಆಘಾತಕಾರಿ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ.
ಪೊಲೀಸ್ ಕಾರ್ಯಾಚರಣೆಯಲ್ಲಿ ಗೋಲಿಬಾರ್ ನಡೆದು ಹತ್ತೊಂಬತ್ತು ಪ್ರತಿಭಟನಾಕಾರರು ಸಾವನ್ನಪ್ಪಿದರು. ಇದು ವ್ಯಾಪಕ ಆಕ್ರೋಶ ಕಾರಣವಾಯಿತು. ಜನರಲ್ ಝಡ್ ಎಂದು ಕರೆದುಕೊಳ್ಳುವ ಪ್ರತಿಭಟನಾಕಾರರು, ರಾಜಕಾರಣಿಗಳ ಐಷಾರಾಮಿ ಜೀವನಶೈಲಿ ಮತ್ತು ನೇಪಾಳದ ಜನರ ಜೀವನ ಪರಿಸ್ಥಿತಿಗಳ ನಡುವಿನ ದೊಡ್ಡ ಅಂತರವನ್ನು ಎತ್ತಿ ತೋರಿಸಿದ್ದು, ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಯಿತು. ಒಂದು ವರ್ಗದ ಪ್ರತಿಭಟನಾಕಾರರು ಸರ್ಕಾರಿ ಕಟ್ಟಡಗಳು ಮತ್ತು ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. (ಏಜೆನ್ಸೀಸ್)