ನ್ಯೂಸ್

ಬಿಜೆಪಿಯವರು ಪ್ಲಾಸ್ಟಿಕ್​ ಆಕಳನ್ನು ಪೂಜಿಸುತ್ತಾರೆ, ಅವರು ಮನೆಯಲ್ಲಿ ಆಕಳು ಕಟ್ಟಿಲ್ಲ: ವಿನಯ್ ಕುಲಕರ್ಣಿ ವಾಗ್ದಾಳಿ

ಬೆಳಗಾವಿ: ಬಿಜೆಪಿ ಮಾಡಿದ್ದ ಕೆಲ ನಿರ್ಧಾರಗಳನ್ನು ಒಂದೊಂದಾಗಿ ಹಿಂಪಡೆಯಲು ಮುಂದಾಗಿರುವ ನೂತನ ಸರ್ಕಾರ, ಗೋಹತ್ಯೆ ಸಂಬಂಧಿತ ಕಾನೂನನ್ನು ವಾಪಸ್​ ಪಡೆಯಲು ಮುಂದಾಗಿದೆ. ಈ ವಿಚಾರಕ್ಕೆ ಪ್ರತಿಪಕ್ಷ ಬಿಜೆಪಿ ನಾಯಕರು ಖಂಡಿಸುತ್ತಿದ್ದಾರೆ. ಇದೀಗ ಬೆಳಗಾವಿ ಶಾಸಕ ವಿನಯ್ ಕುಲಕರ್ಣಿ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೂ ಮುನ್ನ ಪಶು ಸಂಗೋಪನಾ ಇಲಾಖೆ ಸಚಿವರು ಗೋವುಗಳನ್ನು ಕಡಿದರೆ ಏನಾಗುತ್ತದೆ ಎಂದು ಪ್ರಶ್ನಿಸಿದ್ದು ಇದಕ್ಕೆ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ನಡುವೆ ಬೆಳಗಾವಿ ಶಾಸಕ ಬೆಳಗಾವಿಯಲ್ಲಿ ಶಾಸಕ ವಿನಯ ಕುಲಕರ್ಣಿ ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ವಿಚಾರವಾಗಿ ಹೇಳಿಕೆ ನೀಡಿದ್ದು "ಬಿಜೆಪಿಯವರು ಪ್ಲಾಸ್ಟಿಕ್​ ಆಕಳನ್ನು ಪೂಜಿಸುತ್ತಾರೆ" ಎಂದಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ವಿನಯ್ ಕುಲಕರ್ಣಿ, "ಬಿಜೆಪಿಯವರು ಯಾರೂ ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ. ಬರೀ ಮಾತು ಆಡುತ್ತಾರೆ ಅಷ್ಟೇ. ಬಿಜೆಪಿಯವರು ಪ್ಲ್ಯಾಸ್ಟಿಕ್ ಆಕಳನ್ನು ಪೂಜೆ ಮಾಡುತ್ತಾರೆ" ಎಂದು ಕಾಲೆಳೆದಿದ್ದಾರೆ.

"ನನ್ನ ಡೈರಿಯಲ್ಲಿ 1600 ಹಸುಗಳು ಇವೆ. ನಾನು ದೊಡ್ಡ ಹೈನುಗಾರಿಕೆ ಹೊಂದಿದ್ದೇನೆ. ಅರ್ಧದಷ್ಟು ಹೋರಿಗಳನ್ನು ಇಟ್ಟುಕೊಂಡು ನಾವು ಏನೂ ಮಾಡಲು ಸಾಧ್ಯವಿಲ್ಲ. ಕೃಷಿಯಲ್ಲಿ ಎತ್ತು ಬಳಕೆ ಸಹ ಕಡಿಮೆಯಾಗಿದೆ. ಮೇವು, ಕಾರ್ಮಿಕರ ವೆಚ್ಚ ಹೆಚ್ಚು ಆಗಿದೆ. ಮಾತಾಡಿ ಜನರಿಗೆ ದಾರಿ ತಪ್ಪಿಸುವುದು ಬೇರೆ. ವಾಸ್ತವವಾಗಿ ಅನುಭವಿಸುವುದು ಬೇರೆ.

ದೇಶಿ ತಳಿ ಉಳಿಸಲು ಸರ್ಕಾರ ಯೋಜನೆ ಮಾಡಲಿ. ಎಚ್ಎಫ್ ತಳಿಯನ್ನು ಇಟ್ಟುಕೊಂಡು ಏನ್ ಮಾಡೋದು? ಯಾರ ಬಳಿಯಾದ್ರು ದುಡ್ಡು ತಂದು ಗೋ ಶಾಲೆ ಮಾಡೊದು ಬೇರೆ, ವಾಸ್ತವವಾಗಿ ಡೈರಿ ಫಾರ್ಮ್ ಮಾಡೋದೇ ಬೇರೆ. ಕೋಟಿ ಕೋಟಿ ಸಾಲ ಮಾಡಿ ಡೈರಿ ನಡೆಸುತ್ತೇವೆ.

ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಆಗಲಿದೆ. ಜಾತಿ ಹೆಸರನ್ನು ರಾಜಕೀಯ ಮಾಡೋದು ಬೇರೆ. ಸರ್ಕಾರ ರೈತನ್ನು ಕರೆದು ಮಾತನಾಡಲಿ ಎಂದು ಆಗ್ರಹ ಮಾಡುತ್ತಿದ್ದು ಗೋವು, ಜಾತಿ ಮೇಲೆ ರಾಜಕೀಯ ಮಾಡೋದು ಸರಿಯಲ್ಲ" ಎಂದು ಬಿಜೆಪಿ ನಾಯಕರ ತೀವ್ರ ಗಂಭೀರ ವಾಗ್ದಾಳಿ ನಡೆಸಿದ್ದಾರೆ.