ರಾಮನಗರ : ಹೋಬಳಿ ಹಾಗೂ ಗ್ರಾಪಂ ಮಟ್ಟದಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮೆ) ಯೋಜನೆಯ ಪ್ರಚಾರಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಬೆಳೆ ವಿಮೆ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್, ಬೆಳೆ ವಿಮೆ ನೋಂದಣಿಯಿಂದ ರೈತರಿಗೆ ಆಗುವ ಅನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದರು.
ಜಿಲ್ಲೆಯಲ್ಲಿ 2020 - 21 ನೇ ಸಾಲಿನಲ್ಲಿ ಅಂದಾಜು 32,743 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, 27,412 ರೈತರು ಮಾವು ಕೃಷಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ 2021-22 ರ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಮಾವು ಬೆಳೆಯನ್ನು ವಿಮಾ ವ್ಯಾಪ್ತಿಗೆ ಒಳಪಡಿಸಿದ್ದು, ಬೆಳೆ ಸಾಲ ಪಡೆದ ರೈತರು ಕಡ್ಡಾಯವಾಗಿ ವಿಮೆ ಮಾಡಿಸತಕ್ಕದ್ದು, ಸಾಲ ಪಡೆಯದ ರೈತರು ತಮ್ಮ ವ್ಯಾಪ್ತಿಯ ಬ್ಯಾಂಕ್‌ಗಳ ಮೂಲಕ ನೋಂದಾಣಿ ಮಾಡಿಸಿಕೊಳ್ಳಬಹುದಾಗಿದೆ ಎಂದರು.
ಪ್ರತಿ ಹೆಕ್ಟೇರ್‌ಗೆ ಗರಿಷ್ಠ ವಿಮೆ ಮೊತ್ತ 80,000ರೂ. ಆಗಿದ್ದು, ರೈತರು ಶೇ.5ರಂತೆ ಪ್ರತಿ ಹೆಕ್ಟೇರ್‌ಗೆ 4000 ರೂ. ಪಾವತಿಸಬೇಕಾಗಿರುತ್ತದೆ.
ಸರ್ಕಾರದ ಆದೇಶದ ಪ್ರಕಾರ ಜಿಲ್ಲೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಜನರಲ್ ಇನ್ಶುರೆನ್ಸ್ ಕಂಪನಿ ಅನುಮೋದಿತ ವಿಮಾ ಸಂಸ್ಥೆಗಳಾಗಿವೆ. 2019-20 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 1,718 ಜನ ವಿಮೆಗೆ ನೋಂದಾಯಿಸಿದ್ದು, 40.60 ಲಕ್ಷ ರೂ. ವಿಮಾ ಕಂತು ಪಾವತಿಸಿರುತ್ತಾರೆ. ಒಟ್ಟು ರೂ.377.57 ಲಕ್ಷ ರೈತರ ಖಾತೆಗೆ ವಿಮಾ ಮೊತ್ತ ಪಾವತಿಯಾಗಿರುತ್ತದೆ.
2020-21ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 1186 ಜನ ವಿಮೆಗೆ ನೋಂದಾಯಿಸಿದ್ದು, 29.49 ಲಕ್ಷ ರೂ. ವಿಮಾ ಕಂತನ್ನು ಪಾವತಿಸಿರುತ್ತಾರೆ. ವಿಮೆ ಸೌಲಭ್ಯ ಪಡೆಯಲು ನೋಂದಾವಣೆಗೆ ಜು.31 ಕೊನೆಯ ದಿನಾಂಕವಾಗಿದೆ ಎಂದು ಜಿಲ್ಲಾಡಳಿತ ಹಾಘೂ ತೋಟಗಾರಿಕೆ ಇಲಾಖೆ ತಿಳಿಸಿವೆ.