ನ್ಯೂಸ್

ನೀರಿಗೆ ಇಳಿದು ವಿವಿಧ ಗ್ರಾಮಗಳ ಗ್ರಾಮಸ್ಥರ ಪ್ರತಿಭಟನೆ

ಬನ್ನೂರು: ಪಟ್ಟಣದ ಸಮೀಪದ ಯಾಚೇನಹಳ್ಳಿ, ಹುಣಸಗಹಳ್ಳಿ, ತುರಗನೂರು, ನೆರಳೆಕೆರೆ ಗ್ರಾಮದ ರೈತಾಪಿ ವರ್ಗಕ್ಕೆ ಜೀವನಾಡಿಯಾದ ಮರಯ್ಯನಕೆರೆಗೆ ನೀರನ್ನು ತುಂಬಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಕರ್ನಾಟಕ ರಾಜ್ಯ ರೈತ ಸಂಘ(ಮೂಲ ಸಂಘಟನೆ) ನೇತೃತ್ವದಲ್ಲಿ ಗುರುವಾರ ಮರಯ್ಯನಕೆರೆಗೆ ಇಳಿದು ಪ್ರತಿಭಟನೆ ನಡೆಸಿದರು.


ಯಾಚೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ವೈ.ಎಸ್. ರಾಮಸ್ವಾಮಿ ಮಾತನಾಡಿ, ಮರಯ್ಯನಕೆರೆ ಟಿಪ್ಪುವಿನ ಕಾಲದಿಂದಲೂ ಇದ್ದು ಅಂದಿನಿಂದಲೂ ಸುತ್ತಮುತ್ತಲಿನ ಗ್ರಾಮಗಳಿಗೆ ಜೀವನಾಧಾರವಾಗಿದೆ. ಟಿಪ್ಪು ಯುದ್ಧಕ್ಕೆ ಹೋಗುವ ಮೊದಲು ಈ ಭಾಗದಲ್ಲಿ ವಿಶ್ರಾಂತಿ ಪಡೆದುಕೊಂಡು ಹೋಗುತ್ತಿದ್ದುದರ ಇನ್ನೂ ವಿಶ್ರಾಂತಿಮಂಟಪ ಇಲ್ಲೇ ಇದೆ. ಇಂತಹ ಐತಿಹಾಸಿಕ ಕೆರೆ ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗುರಿಯಾಗಿ ನೀರನ್ನು ಕಾಣದಂತಾಗಿದೆ. ಕೂಡಲೇ ಅಧಿಕಾರಿಗಳು ನೀರನ್ನು ತುಂಬಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.


ಕೆರೆಗೆ ನೀರನ್ನು ತುಂಬಿಸುವುದರಿಂದ ರೈತಾಪಿ ವರ್ಗಕ್ಕೆ ಮಾತ್ರ ಅನುಕೂಲವಾಗುವುದಿಲ್ಲ. ಹೈನುಗಾರಿಕೆ ಆಶ್ರಯಿಸಿರುವ ಜನರಿಗೆ, ಮೀನುಗಾರಿಕೆಗೆ, ಜಾನುವಾರುಗಳಿಗೆ ಹೀಗೆ ಪ್ರತಿಯೊಂದಕ್ಕೂ ಅನುಕೂಲವಾಗುತ್ತದೆ. ಅಧಿಕಾರಿಗಳು ಎಚ್ಚೆತ್ತು ನೀರನ್ನು ತುಂಬಿಸುವ ಕಾರ್ಯ ಮಾಡಲಿ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ(ಮೂಲ ಸಂಘಟನೆ)ಯ ಜಿಲ್ಲಾಧ್ಯಕ್ಷ ನಾರಾಯಣ್ ಮಾತನಾಡಿ, ಮರಯ್ಯನಕೆರೆಗೆ ನೀರು ತುಂಬಿಸುವಲ್ಲಿ ಸರ್ಕಾರಗಳು, ಅಧಿಕಾರಿ ವರ್ಗದವರು ವಿಫಲವಾಗಿದ್ದು, ಈ ಭಾಗದ ರೈತರಿಗೆ ಅನನುಕೂಲವನ್ನುಂಟು ಮಾಡಿದೆ. ಹಿಂದಿನ ಸರ್ಕಾರದಿಂದಲೂ ನಿವಾಸಿಗಳು ಶಾಸಕರನ್ನು ಭೇಟಿ ಮಾಡುತ್ತಿದ್ದಾರೆ ವಿನಃ ಇನ್ನೂ ಕೆರೆಗೆ ನೀರನ್ನು ಬಿಡುವ ಕೆಲಸವನ್ನು ಮಾಡಿಲ್ಲ ಎಂದು ದೂರಿದರು.


ಹಲವಾರು ಎಕರೆಗೆ ಆಶ್ರಯವಾಗಿರುವ ಮರಯ್ಯನ ಕೆರೆ ತುಂಬಿದರೆ ಅಂತರ್ಜಲ ಹೆಚ್ಚಾಗಿ ಸುತ್ತಮುತ್ತಲಿನ ರೈತರಿಗೆ ಬೇಸಾಯಕ್ಕೆ ಅನುಕೂಲವಾಗುತ್ತದೆ. ಜತೆಗೆ ವ್ಯರ್ಥವಾಗಿ ನೀರಿನ ಬಳಕೆಯಾಗುವುದು ತಪ್ಪುತ್ತದೆ. ಕೂಡಲೇ ನೀರನ್ನು ತುಂಬುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ರೈತರ ಕಷ್ಟವನ್ನು ಕೇಳಲು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟುಹಿಡಿದು ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.


ನಂತರ ಸ್ಥಳಕ್ಕೆ ಆಗಮಿಸಿದ ಎಇಇ ತಮ್ಮಯ್ಯ ಅವರು ಪ್ರತಿಭಟನಾನಿರತರ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಮರಯ್ಯನಕೆರೆಗೆ ನೀರು ತುಂಬಿಸಲು ನಾಲೆಯ ಬಳಿಯಲ್ಲಿರುವ ತೊಂದರೆಯನ್ನು ಬಗೆಹರಿಸುವುದಾಗಿ ತಿಳಿಸಿದರಲ್ಲದೆ, ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜತೆಗೆ ಕೆರೆಯ ಹೂಳು ತೆಗೆಯಲು ಅನುದಾನದ ಕೊರತೆಯಿದ್ದು, ಅನುದಾನಕ್ಕೆ ಮೇಲಿನ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ನಂತರ ಪ್ರತಿಭಟನೆಯನ್ನು ಹಿಂಪಡೆದರಲ್ಲದೆ, ಕೂಡಲೇ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು.


ಪ್ರತಿಭಟನೆಯಲ್ಲಿ ಯಾಚೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಮಾಜಿ ಅಧ್ಯಕ್ಷ ನಾಗೇಶ್, ನೆರಳೆಕೆರೆ ನಾಗರಾಜು, ಹನುಮಂತು, ರಮೇಶ, ತುರಗನೂರು ಕೃಷ್ಣ, ಮೇಗಲಕೊಪ್ಪಲಿನ ರಂಗಸ್ವಾಮಿ, ಗಾಡಿಜೋಗಿಹುಂಡಿ ಜಯರಾಮ್, ನಾಗಪ್ಪ, ಕೃಷ್ಣಪ್ಪ, ಮಹದೇವು, ಸೀಹಳ್ಳಿ ರವಿ, ಸುತ್ತಮುತ್ತಲಿನ ಗ್ರಾಮದ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.