ಹೊಸ ಮದ್ಯದಂಗಡಿಗೆ ಪರವಾನಗಿ ನೀಡದಂತೆ ಆಗ್ರಹಿಸಿ ಮಾರಶೆಟ್ಟಿಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ರುದ್ರಪ್ಪ, ಅಶೋಕರಾವ್, ಕಿರಣ್‌ಕುಮಾರ್, ಶಿವಣ್ಣ ಇತರರಿದ್ದರು. 
ನ್ಯೂಸ್

ಮದ್ಯದಂಗಡಿ ಸ್ಥಳಾಂತರಿಸಲು ಗ್ರಾಮಸ್ಥರ ಒತ್ತಾಯ

ಶಿವಮೊಗ್ಗ : ನಮ್ಮ ಗ್ರಾಮದ ಕಾಲೇಜು ರಸ್ತೆಯಲ್ಲಿರುವ ಎರಡು ಮದ್ಯದಂಗಡಿಗಳನ್ನು ಸ್ಥಳಾಂತರಿಸಬೇಕು. ಹೊಸದಾಗಿ ಮದ್ಯದಂಗಡಿಗಳಿಗೆ ಪರವಾನಗಿ ನೀಡಬಾರದೆಂದು ಆಗ್ರಹಿಸಿ ಭದ್ರಾವತಿ ತಾಲೂಕು ಮಾರಶೆಟ್ಟಿಹಳ್ಳಿ ಗ್ರಾಮಸ್ಥರು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಾಲೇಜು ರಸ್ತೆಯಲ್ಲಿರುವ ಮದ್ಯದಂಗಡಿಗಳ ಪಕ್ಕದಲ್ಲಿ ಒಂದು ಖಾಸಗಿ ಹಾಗೂ ಸರ್ಕಾರಿ ಶಾಲೆ, ಅಂಗನವಾಡಿಯೂ ಇದೆ. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಅಲ್ಲಿ ಕಾರ್ಯನಿರ್ವಹಿಸುತ್ತಿವೆ. ಮದ್ಯವ್ಯಸನಿಗಳ ಕಾರಣದಿಂದ ಆ ರಸ್ತೆಯಲ್ಲಿ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರ ಓಡಾಟಕ್ಕೆ ಸಮಸ್ಯೆಯಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಈಗಾಗಲೇ ಎರಡು ಮದ್ಯದಂಗಡಿಗಳು ಇವೆ. ಮತ್ತೊಂದು ವೈನ್‌ಶಾಪ್‌ಗೆ ಪರವಾನಗಿ ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಮತ್ತೊಂದು ಮದ್ಯದಂಗಡಿ ತೆರೆಯಬಾರದು. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಅಶೋಕ್‌ರಾವ್, ಶಿವಣ್ಣ, ರುದ್ರಪ್ಪ, ಗಣೇಶ್, ಕಿರಣ್‌ಕುಮಾರ್ ಭಾಗವಹಿಸಿದ್ದರು.