ಸಾಗರ: ಸೊರಬ ಪಟ್ಟಣ ಮತ್ತು ಆನವಟ್ಟಿ ಭಾಗಕ್ಕೆ ನೀರು ಪೂರೈಸಲು ಸಾಗರ ತಾಲೂಕಿನ ತಾಳಗುಪ್ಪ ಸಮೀಪ ವರದಾ ನದಿಗೆ ಬ್ಯಾರೇಜ್ ನಿರ್ಮಿಸುವ ಯೋಜನೆ ಕಾರ್ಯಸಾಧುವಲ್ಲ. ಯೋಜನೆಯಿಂದ ತಾಳಗುಪ್ಪ ಹೋಬಳಿಯ ಮೂರು ಗ್ರಾಪಂಗಳ ವ್ಯಾಪ್ತಿಯ ರೈತರು ಜಮೀನನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ರೈತ ಮುಖಂಡ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು ಹೇಳಿದರು.
ವರದಾ ನದಿಗೆ ಕನ್ನಹೊಳೆ, ಮಾವಿನಹೊಳೆ ಮತ್ತು ಕಣಸೆಹೊಳೆ ತಟ್ಟೆಗುಂಡಿ-ಕಡಸೂರು ಹತ್ತಿರ ಬಂದು ಸೇರುತ್ತದೆ. ಮಳೆಗಾಲದ ಒಂದೂವರೆ ತಿಂಗಳು ಹಿರೇನೆಲ್ಲೂರು, ಸೈದೂರು, ಕಾನ್ಲೆ ಗ್ರಾಪಂಗಳ ಬಹುತೇಕ ಗ್ರಾಮಗಳ ಜಮೀನಿನ ಮೇಲೆ ನೀರು ನಿಂತು ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆ ಕೃಷಿಭೂಮಿ ನೀರಿನಲ್ಲಿ ಮುಳುಗಿದರೆ ಬದುಕು ನರಕವಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ನೆರೆ ನೀರನ್ನು ಸಂಗ್ರಹಿಸಲು ತಾಳಗುಪ್ಪ ಭಾಗದಲ್ಲಿ ಐದು ಬ್ಯಾರೇಜ್ ನಿರ್ಮಿಸಿ ಏತ ನೀರಾವರಿ ಮೂಲಕ ಸೊರಬ ಪಟ್ಟಣ ಮತ್ತು ಆನವಟ್ಟಿಗೆ ಒಯ್ಯುವ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಯೋಜನೆ ಅನುಷ್ಠಾನಕ್ಕೂ ಮೊದಲು ಸ್ಥಳೀಯ ರೈತರ ಅಭಿಪ್ರಾಯ ಪಡೆಯಲಿಲ್ಲ. ಸಾಧಕ-ಬಾಧಕಗಳ ಬಗ್ಗೆ ಗಂಭೀರ ಚಿಂತನೆ ನಡೆಸಿಲ್ಲ. ಏಕಾಏಕಿ 5 ಕೋಟಿ ರೂ. ಹಣ ಮಂಜೂರು ಮಾಡಿಸಿಕೊಂಡು ತಮ್ಮ ಮೂಗಿನ ನೇರಕ್ಕೆ ಮಾತನಾಡುವುದು ಸರಿಯಲ್ಲ ಎಂದರು.
ಯೋಜನೆ ಬಗ್ಗೆ ರೂಪುರೇಷೆಯನ್ನು ರೈತರಿಗೆ ತಿಳಿಸಬೇಕು. ಇಲ್ಲವಾದಲ್ಲಿ ರೈತ ಸಂಘದ ಮೂಲಕ ಕಾಮಗಾರಿ ನಿಲ್ಲಿಸಲು ಹೋರಾಟ ರೂಪಿಸುವುದು ಅನಿವಾರ್ಯವಾಗುತ್ತದೆ ರಾಜಕೀಯ ಅನುಕೂಲಕ್ಕಾಗಿ ತಾಳಗುಪ್ಪ ಹೋಬಳಿಯ ರೈತರ ಬದುಕನ್ನು ಬಲಿಕೊಡುವ ಯೋಜನೆ ರೂಪಿಸುತ್ತಿದ್ದಾರೆ ಎಂದು ದೂರಿದರು.
ದೇವು ಆಲಳ್ಳಿ, ರಮೇಶ್ ಐಗಿನಬೈಲು, ದಿನೇಶ್ ಕಾಗೋಡು, ರಾಜು ತೊರಗೋಡು ಸುದ್ದಿಗೋಷ್ಠಿಯಲ್ಲಿದ್ದರು.