ಶಿವಮೊಗ್ಗ: ಕಂದಾಯ ಇಲಾಖೆಯಲ್ಲಿ ಖಾಲಿ ಇದ್ದ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ.
ಸೆ.29, ಅ.26 ಹಾಗೂ 27ರಂದು ಕಡ್ಡಾಯ ಕನ್ನಡ ಹಾಗೂ ಪತ್ರಿಕೆ-1 ಮತ್ತು ಪತ್ರಿಕೆ-2ರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ್ದು ಶಿವಮೊಗ್ಗ ಜಿಲ್ಲಾ ಕಂದಾಯ ಘಟಕದಲ್ಲಿ 31 ಗ್ರಾಮ ಅಡಳಿತಾಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಪ್ರಾಧಿಕಾರ ನೀಡಿರುವ ಮೆರಿಟ್ ಪಟ್ಟಿಯಲ್ಲಿ 1:3ರ ಅನುಪಾತದಂತೆ ಅಭ್ಯರ್ಥಿಗಳ ಪಟ್ಟಿಯನ್ನು ಶಿವಮೊಗ್ಗ ಜಿಲ್ಲಾ ವೆಬ್ಸೈಟ್ https://shivamogga.nic.inರಲ್ಲಿ ಪ್ರಕಟಿಸಿದೆ.
ಅಭ್ಯರ್ಥಿಗಳು ಕೋರಿರುವ ವಿವಿಧ ಮೀಸಲಾತಿಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು (ನಿಗದಿತ ದಿನಾಂಕದೊಳಗೆ ಪಡೆಯಲಾದ) ಹಾಗೂ ವಿದ್ಯಾರ್ಹತೆಯ ಮೂಲ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು 2025ರ ಜ.6 ಮತ್ತು 7ರಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 11ರಿಂದ ಸಂಜೆ 5ರೊಳಗೆ ಪರಿಶೀಲನೆಗಾಗಿ ಖುದ್ದಾಗಿ ಹಾಜರುಪಡಿಸಬೇಕು. ಗೈರು ಹಾಜರಾದಲ್ಲಿ ಎರಡನೇ ಅವಕಾಶ ನೀಡುವುದಿಲ್ಲ ಎಂದು ಡಿಸಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.