ನವದೆಹಲಿ: ದೇಶಾದ್ಯಂತ ಲೋಕಸಭಾ ಚುನಾವಣೆ ಕಾವು ಚುರುಕು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದು, ಮುಂದಿನ 100 ದಿನಗಳ ಕಾಲ ಹೊಸ ಚೈತನ್ಯ ಮತ್ತು ಆತ್ಮವಿಶ್ವಾಸದಿಂದ ಕೆಲಸ ಮಾಡುವಂತೆ ಕರೆ ನೀಡಿದ್ದಾರೆ. ಹೊಸ ಮತದಾರರನ್ನು ತಲುಪಲು, ಅವರ ವಿಶ್ವಾಸವನ್ನು ಗೆಲ್ಲುವ ಮೂಲಕ ಪ್ರಬಲ ಜನಾದೇಶದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವಂತೆ ಕಮಲ ಕಾರ್ಯಕರ್ತರು, ನಾಯಕರಿಗೆ ಮಾರ್ಗದರ್ಶನ ಮಾಡಿದ್ದಾರೆ. ಭಾನುವಾರ ಬಿಜೆಪಿ ರಾಷ್ಟ್ರೀಯ ಸಮಾವೇಶ ಉದ್ದೇಶಿಸಿ ಮಾತನಾಡಿ, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ದೊಡ್ಡ ನಿರ್ಣಯಗಳನ್ನು ಕೈಗೊಳ್ಳಬೇಕಾಗಿದೆ. ಇದಕ್ಕೆ ದೊಡ್ಡ ಪ್ರಮಾಣದಲ್ಲಿ ಜನಾದೇಶ ಅಗತ್ಯವಾಗಿದೆ. ‘ವಿಕಸಿತ ಭಾರತ’ ಕಡೆಗೆ ತ್ವರಿತವಾಗಿ ಸಾಗಲು ಮುಂದಿನ ಐದು ವರ್ಷಗಳು ನಿರ್ಣಾಯಕವಾಗಲಿವೆ. ಇದಕ್ಕಾಗಿ ಬಿಜೆಪಿ ಪ್ರಬಲ ಸಂಖ್ಯೆಯೊಂದಿಗೆ ಅಧಿಕಾರಕ್ಕೆ ಮರಳುವುದು ಅಗತ್ಯ ಎಂದರು.
ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಧಾನಿ ಮೋದಿ ಅಭಿಮತ
ನಾಯಕರು, ಕಾರ್ಯಕರ್ತರಲ್ಲಿ ಹೊಸ ಚೈತನ್ಯ, ಆತ್ಮವಿಶ್ವಾಸ
ದೇಶದ ಅಭಿವೃದ್ಧಿಗೆ ಮುಂದಿನ ಐದು ವರ್ಷ ನಿರ್ಣಾಯಕ
ಸಮಾವೇಶದ ಪ್ರಮುಖ ನಿರ್ಣಯಗಳು
ರಾಮಮಂದಿರ ನಿರ್ಮಾಣ ಮುಂದಿನ 1,000 ವರ್ಷಗಳ ಕಾಲ ‘ರಾಮ ರಾಜ್ಯ’ ಸ್ಥಾಪನೆಗೆ ನಾಂದಿ. ವಿಕಸಿತ ಭಾರತ ನಿರ್ಮಾಣ ಈಡೇರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ಬಾಲರಾಮನ ಪ್ರತಿಷ್ಠಾಪನೆಯನ್ನು ಯಶಸ್ವಿಯಾಗಿ ನಡೆಸಿದ ಮೋದಿ ನಾಯಕತ್ವಕ್ಕೆ ಅಭಿನಂದನೆ.
ರಾಮರಾಜ್ಯದ ತತ್ತ್ವ ನಿಜವಾದ ಪ್ರಜಾಪ್ರಭುತ್ವದ ಪರಿಕಲ್ಪನೆ.
ಪ್ರಧಾನಿಯವರ ನಾಯಕತ್ವದಲ್ಲಿ ಭಾರತದ ಏಕತೆಯು ಸಾರ್ವಜನಿಕ ಸಹಭಾಗಿತ್ವದ ಶಕ್ತಿಯನ್ನು ಪಡೆದುಕೊಂಡಿದ್ದು, ರಾಷ್ಟ್ರದ ನೈತಿಕತೆಯನ್ನು ಹೆಚ್ಚಿಸಿದೆ.
ಕಳೆದ 10 ವರ್ಷಗಳಲ್ಲಿ ಭಾರತೀಯ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಐತಿಹಾಸಿಕ ಹೆಮ್ಮೆ ಪುನಃಸ್ಥಾಪಿಸಲಾಗಿದೆ.
ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಲಾಯಿತು. ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಸಚಿವರಾದ ಅಮಿತ್ ಷಾ, ರಾಜನಾಥ ಸಿಂಗ್, ನಿತಿನ್ ಗಡ್ಕರಿ, ಮಾಜಿ ಸಿಎಂ ಯಡಿಯೂರಪ್ಪ ಇದ್ದರು.
ಮೋದಿ ಹೇಳಿದ್ದೇನು?
ಸೈದ್ಧಾಂತಿಕವಾಗಿ ಬಿಜೆಪಿ ಎದುರಿಸಲು ಪ್ರತಿಪಕ್ಷಗಳಿಗೆ ಧೈರ್ಯವಿಲ್ಲ.
ಕಾಂಗ್ರೆಸ್ ಹತಾಶಗೊಂಡಿದೆ. ಮೋದಿಯನ್ನು ನಿಂದಿಸುವುದು ಮತ್ತು ಸುಳ್ಳು ಆರೋಪಗಳನ್ನು ಮಾಡುವುದು ಅದರ ನಾಯಕರ ಏಕೈಕ ಗುರಿಯಾಗಿದೆ.
ಎನ್ಡಿಎ 400ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ 370ರ ಗಡಿ ದಾಟಬೇಕು.
ಕೋಟ್ಯಂತರ ಮಹಿಳೆಯರು, ಬಡವರು ಮತ್ತು ಯುವಕರ ಕನಸುಗಳನ್ನು ನನಸಾಗಿಸುವುದು ನಮ್ಮ ಧ್ಯೇಯವಾಗಿದೆ.
ನಾವು ದೇಶವನ್ನು ಮೆಗಾ ಹಗರಣಗಳು ಮತ್ತು ಭಯೋತ್ಪಾದಕ ದಾಳಿಗಳಿಂದ ಮುಕ್ತಗೊಳಿಸಿದ್ದೇವೆ.
ಬಡ ಮತ್ತು ಮಧ್ಯಮ ವರ್ಗದವರ ಜೀವನ ಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿದ್ದೇವೆ.
ಮೂರನೇ ಬಾರಿಗೆ ಪ್ರಧಾನಿಯಾಗಲು ಬಯಸುತ್ತಿರುವುದು ಅಧಿಕಾರ ಅನುಭವಿಸಲು ಅಲ್ಲ. ದೇಶಕ್ಕಾಗಿ ಕೆಲಸ ಮಾಡಲು.
10 ವರ್ಷಗಳ ಆಡಳಿತದಲ್ಲಿ 25 ಕೋಟಿ ಜನರನ್ನು ಬಡತನದಿಂದ ಹೊರತಂದಿರುವುದು ಸಾಮಾನ್ಯ ಸಾಧನೆಯಲ್ಲ.
ಮಹಾಭಾರತ ಯುದ್ಧದಲ್ಲಿ ಕೌರವರು ಮತ್ತು ಪಾಂಡವರು ಎಂಬ ಎರಡು ಪಾಳಯಗಳಿದ್ದಂತೆ ಈಗಿನ ಲೋಕಸಭಾ ಚುನಾವಣೆಯಲ್ಲೂ ಎರಡು ಪಾಳಯಗಳಿವೆ. ಒಂದೆಡೆ ಪ್ರಧಾನಿ ಮೋದಿ ನಾಯಕತ್ವದಲ್ಲಿ ಅಭಿವೃದ್ಧಿಪರ ಮೈತ್ರಿಕೂಟ ಇದೆ. ಮತ್ತೊಂದೆಡೆ ರಾಹುಲ್ ಗಾಂಧಿ ನೇತೃತ್ವದಲ್ಲಿ ವಂಶಾಡಳಿತದ ಮೈತ್ರಿ ಇದೆ. ಬಡವರಿಗಾಗಿ ದುಡಿಯುವ ಬಿಜೆಪಿ ಪರ ದೇಶ ನಿಲ್ಲುತ್ತದೆ.