ಐಎನ್ಎಸ್ ವಿಕ್ರಮಾದಿತ್ಯ ಯುದ್ಧ ನೌಕೆ ಶನಿವಾರ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ನೌಕೆ ಮೇಲೆ ದೇಶೀಯ ನಿರ್ವಿುತ ಲಘು ಯುದ್ಧ ವಿಮಾನ ತೇಜಸ್ ಎಂಕೆ-1 ನಿಯಂತ್ರಿತ ಲ್ಯಾಂಡಿಂಗ್ ಮಾಡಿದ್ದು, ರಷ್ಯಾ, ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್, ಚೀನಾ ಬಳಿಕ ಈ ಸಾಧನೆ ಮಾಡಿದ 6ನೇ ರಾಷ್ಟ್ರ ಭಾರತ ಎಂಬ ಕೀರ್ತಿಗೆ ಪಾತ್ರವಾಗಿದೆ. ಚೀನಾ ಮತ್ತು ಪಾಕಿಸ್ತಾನ ಉತ್ತರ ಅರಬ್ಬಿ ಸಮುದ್ರದಲ್ಲಿ ನೌಕಾ ಸಮರಾಭ್ಯಾಸ ಆರಂಭಿಸಿವೆ.
ಭಾರತೀಯ ನೌಕಾಸೇನೆ ಸಾಮರ್ಥ್ಯವನ್ನು ಎದುರಾಳಿಗಳಿಗೆ ದೃಢಪಡಿಸುವ ಸಲುವಾಗಿ ವಿಕ್ರಮಾದಿತ್ಯ ನೌಕೆಯನ್ನು ಉತ್ತರ ಅರಬ್ಬಿ ಸಮುದ್ರಕ್ಕೆ ಕಳಿಸಿ, ಈ ಪ್ರಯೋಗ ಯಶಸ್ವಿಯಾಗಿ ನಡೆಸಲಾಗಿದೆ ಎಂದು ನೌಕಾಸೇನೆ ಸಾರ್ವಜನಿಕ ಸಂಪರ್ಕಾಧಿಕಾರಿ ಟ್ವೀಟ್ ಮಾಡಿದ್ದಾರೆ. ಕಮಾಂಡರ್ ಜೈದೀಪ್ ಮೌಲಾಂಕರ್ ವಿಮಾನವನ್ನು ಬೆಳಗ್ಗೆ 10 ಗಂಟೆಗೆ ಯಶಸ್ವಿಯಾಗಿ ಇಳಿಸಿದರು.
ಕ್ಯಾಪ್ಟನ್ ಶಿವನಾಥ ದಹಿಯಾ ಲ್ಯಾಂಡಿಂಗ್ ಸೇಫ್ಟಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಕಮಾಂಡರ್ ವಿವೇಕ ಪಾಂಡೆ, ಕಮಾಂಡರ್ ಅಂಕುರ ಜೈನ್, ಕ್ಯಾಪ್ಟನ್ ಕಬಾಡವಾಲಾ ಮುಂತಾದ ಅಧಿಕಾರಿಗಳು ಈ ಐತಿಹಾಸಿಕ ಲ್ಯಾಂಡಿಂಗ್ ಯಶಸ್ವಿಯಾಗಲು ಸಹಕಾರ ನೀಡಿದರು.
ಕಾರವಾರ-ಗೋವಾ ನಡುವೆ ಅಭ್ಯಾಸ
ಗೋವಾ ಹಂಸ ನೌಕಾನೆಲೆಯಲ್ಲಿ ಕಡಲ ತೀರ ಆಧಾರಿತ ಪರೀಕ್ಷಾ ಸೌಲಭ್ಯ (ಎಸ್ಬಿಟಿಎಫ್) ಇದೆ. ಐಎನ್ಎಸ್ ವಿಕ್ರಮಾದಿತ್ಯ ಕೆಲ ದಿನಗಳಿಂದ ಕಾರವಾರದ ಕದಂಬ ನೌಕಾನೆಲೆಯಲ್ಲಿ ನಿಂತಿತ್ತು. ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ವೆುಂಟ್ ಆರ್ಗನೈಜೇಶನ್ (ಡಿಆರ್ಡಿಒ), ಎರೋನಾಟಿಕಲ್ ಡೆವಲಪ್ವೆುಂಟ್ ಏಜೆನ್ಸಿ (ಎಡಿಆರ್), ಹಿಂದುಸ್ತಾನ್ ಏರೋನಾಟಿಕಲ್ ಲಿ.(ಎಚ್ಎಎಲ್) ಕೌನ್ಸಿಲ್ ಆಫ್ ಸೈಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಮತ್ತು ಡೈರೆಕ್ಟರ್ ಜನರಲ್ ಆಫ್ ಏರೋನಾಟಿಕಲ್ ಕ್ವಾಲಿಟಿ ಅಶೂರೆನ್ಸ್ (ಡಿಜಿಎಕ್ಯುಎ) ಅಧಿಕಾರಿಗಳು ಎರಡು ನೌಕಾನೆಲೆಗಳ ನಡುವೆ ಕಳೆದ ಒಂದು ತಿಂಗಳಿಂದ ಎಂಕೆ-1 ವಿಮಾನವನ್ನು ನಿಯಂತ್ರಿತ ಇಳಿಸುವಿಕೆಯ ಅಭ್ಯಾಸ ನಡೆಸಿದ್ದರು.
ಏನಿದು ನಿಯಂತ್ರಿತ ಲ್ಯಾಂಡಿಂಗ್..?
ಸಾಮಾನ್ಯವಾಗಿ ತೇಜಸ್ ಯುದ್ಧ ವಿಮಾನಗಳು ಲ್ಯಾಂಡ್ ಆಗಲು ಮತ್ತು ಟೇಕ್ಆಫ್ ಆಗಲು 1 ಕಿ.ಮೀ. ರನ್ ವೇ ಬೇಕು. ಆದರೆ, ಅತಿ ಕಡಿಮೆ ಜಾಗದಲ್ಲಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡುವ ವ್ಯವಸ್ಥೆಗೆ ಅರೆಸ್ಟೆಡ್ ಲ್ಯಾಂಡಿಂಗ್ ಎನ್ನಲಾಗುತ್ತದೆ. ವಿಮಾನವು ನೌಕೆಯ ಡೆಕ್ ಮೇಲೆ ಬರುತ್ತಿದ್ದಂತೆ ಕಬ್ಬಿಣದ ಹಗ್ಗವೊಂದನ್ನು ಅದಕ್ಕೆ ಸಿಕ್ಕಿಸಿ, ವಿಮಾನದ ವೇಗವನ್ನು ನಿಯಂತ್ರಿಸಿ ಸುರಕ್ಷಿತವಾಗಿ ನಿರೀಕ್ಷಿತ ಜಾಗದಲ್ಲಿ ನಿಲ್ಲುವಂತೆ ಮಾಡುತ್ತದೆ.
ವಿಕ್ರಮಾದಿತ್ಯ ಮೇಲೆ ಕೇವಲ 95 ಮೀ ಚಲಿಸಿ ಎಂಕೆ-1 ವಿಮಾನವನ್ನು ಲ್ಯಾಂಡ್ ಮಾಡಲಾಯಿತು. ಇದಕ್ಕಾಗಿ ಗೋವಾದಲ್ಲಿ ಕಮಾಂಡರ್ ಜೈದೀಪ್ ಮೌಲಾಂಕರ್ 30ಕ್ಕೂ ಹೆಚ್ಚು ಬಾರಿ ಅಭ್ಯಾಸ ನಡೆಸಿದ್ದರು. ಸದ್ಯ ಐಎನ್ಎಸ್ ವಿಕ್ರಮಾದಿತ್ಯ ಮೇಲೆ ಮಿಗ್ 29 ಯುದ್ಧ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಎಚ್ಎಎಲ್ ನಿರ್ವಿುತ ದೇಶೀಯ ತಂತ್ರಜ್ಞಾನ ಹೊಂದಿರುವ ತೇಜಸ್ ಮಾರ್ಕ್ 1 ವಿಮಾನಗಳನ್ನು 2030ರ ಹೊತ್ತಿಗೆ ಖರೀದಿಸಿ ಬಳಸುವ ಯೋಜನೆಯನ್ನು ನೌಕಾಸೇನೆ ಹೊಂದಿದೆ ಎನ್ನಲಾಗಿದೆ.
ವಿಕ್ರಮಾದಿತ್ಯ ವಿಶೇಷ
ಐಎನ್ಎಸ್ ವಿಕ್ರಮಾದಿತ್ಯ ಭಾರತೀಯ ನೌಕಾಪಡೆಯ ಸೇವೆಯಲ್ಲಿರುವ ಏಕೈಕ ಸಮರ ವಿಮಾನವಾಹಕ ನೌಕೆ. ಯುದ್ಧ ವಿಮಾನಗಳು ಹಾರಾಟ ನಡೆಸಲು ಅನುಕೂಲವಾಗುವ ಸ್ಕೈ-ಜಂಪ್ಗಳು ಈ ನೌಕೆಯಲ್ಲಿವೆ. ನೌಕಾಪಡೆ ಮಿಕೊಯಾನ್-ಗುರೆವಿಚ್ ಮಿಗ್-29ಕೆ ಜೆಟ್ಗಳನ್ನು ಕಾರ್ಯಾಚರಿಸುತ್ತದೆ. ಎಲ್ಸಿಎ-ಎನ್ ಒಂದು ಇಂಜಿನ್ನ ವಿಮಾನವಾಗಿದ್ದು ಎರಡು ಇಂಜಿನ್ನ ಪ್ರಬಲ ಸಮರ ವಿಮಾನ ಹೊಂದುವುದು ನೌಕಾಪಡೆಯ ಗುರಿಯಾಗಿದೆ.