TVK: ಟಿವಿಕೆ ಪಕ್ಷದ ಪ್ರಚಾರದ ಸಮಯದಲ್ಲಿ ತಮಿಳುನಾಡಿನ ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನ ಸಾವನ್ನಪ್ಪಿದ್ದ ಹಿನ್ನಲೆ, ನಟ-ರಾಜಕಾರಣಿ ವಿಜಯ್ ಅವರ ಪಕ್ಷ ಟಿವಿಕೆ ತಮ್ಮ ರಾಜ್ಯಾದ್ಯಂತ ಪ್ರವಾಸವನ್ನು 2 ವಾರಗಳ ಕಾಲ ಸ್ಥಗಿತಗೊಳಿಸಲಾಗಿದೆ.
ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನಾವು ದುಃಖದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದೇವೆ. ಮುಂದಿನ ಎರಡು ವಾರಗಳ ಕಾಲ ನಮ್ಮ ಪಕ್ಷದ ನಾಯಕನ ಸಾರ್ವಜನಿಕ ಸಭೆ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಿಸಲಾಗಿದೆ. ಪಕ್ಷದ ನಾಯಕನೊಂದಿಗೆ ಮಾತನಾಡಿ ಜನರ ಭೇಟಿಗೆ ಸಂಬಂಧಿಸಿದಂತೆ ಹೊಸ ವಿವರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಟಿವಿಕೆ ತನ್ನ ಅಧೀಕೃತ ಎಕ್ಸ್ ಖಾತೆಯ ಮೂಲಕ ತಿಳಿಸಿದೆ.
ಕರೂರು ಕಾಲ್ತುಳಿತ ಘಟನೆ ನಡೆದ ಎರಡು ದಿನಗಳ ಬಳಿಕ ಅಂದರೆ, ಮಂಗಳವಾರ (ಸೆ.30) ಸಂಜೆ ಮೊದಲ ವಿಡಿಯೋ ಸಂದೇಶವನ್ನು ಹಂಚಿಕೊಂಡಿರುವ ನಟ ವಿಜಯ್, ದುರಂತದ ಬಗ್ಗೆ ತಮ್ಮ ನೋವನ್ನು ಹೊರಹಾಕಿದ್ದಾರೆ. "ನನ್ನ ಜೀವನದಲ್ಲಿ ಇಂತಹ ನೋವಿನ ಪರಿಸ್ಥಿತಿಯನ್ನು ನಾನು ಎಂದಿಗೂ ಎದುರಿಸಿಲ್ಲ. ನನ್ನ ದೇಹ ಮತ್ತು ಮನಸ್ಸು ಚಿಂತೆಯಿಂದ ತುಂಬಿ ಹೋಗಿದೆ. ನನ್ನ ಹೃದಯವು ಕೂಡ ನೋವಿನಲ್ಲಿ ಮುಳುಗಿದೆ ಎಂದು ವಿಜಯ್ ಹೇಳಿದ್ದಾರೆ.
ಕರೂರಿನ ಜನರು ಸತ್ಯವನ್ನು ಹೇಳಿದಾಗ, ದೇವರೇ ನನ್ನ ಬಳಿಗೆ ಬಂದು ಅದನ್ನು ಬಹಿರಂಗಪಡಿಸಿದಂತೆ ಅನಿಸಿತು. ಶೀಘ್ರದಲ್ಲೇ, ಎಲ್ಲಾ ಸತ್ಯಗಳು ಬಹಿರಂಗಗೊಳ್ಳುತ್ತವೆ. ನಮಗೆ ಪೊಲೀಸರು ನೀಡಿದ ಸ್ಥಳದಿಂದಲೇ ನಾವು ಮಾತನಾಡಿದ್ದೇವೆ. ನಾವು ಯಾವುದೇ ತಪ್ಪು ಮಾಡಿಲ್ಲ. ಆದರೂ ಪಕ್ಷದ ನಾಯಕರು, ಸ್ನೇಹಿತರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರನ್ನು ಎಫ್‌ಐಆರ್‌ಗಳಲ್ಲಿ ಹೆಸರಿಸಲಾಗುತ್ತಿದೆ ಎಂದು ವಿಜಯ್ ಆರೋಪಿಸಿದರು.
ಇದೇ ವೇಳೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ಗೆ ಮನವಿ ಮಾಡಿದ ವಿಜಯ್, ಮುಖ್ಯಮಂತ್ರಿ ಸರ್, ನೀವು ಸೇಡು ತೀರಿಸಿಕೊಳ್ಳುವ ಉದ್ದೇಶ ಹೊಂದಿದ್ದರೆ, ನನಗೆ ಏನು ಬೇಕಾದರೂ ಮಾಡಿ. ಆದರೆ, ನಮ್ಮ ಬೆಂಬಲಿಗರನ್ನು ಮುಟ್ಟಬೇಡಿ. ನಾನು ಮನೆಯಲ್ಲಿ ಅಥವಾ ನನ್ನ ಕಚೇರಿಯಲ್ಲಿ ಇರುತ್ತೇನೆ. ನೀವು ನನಗೆ ಏನು ಬೇಕಾದರೂ ಮಾಡಿ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)