ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ 
ನ್ಯೂಸ್

ವಿಜಯ್ ಸರ್ಕಾರವೂ 'ದೇವರ ವಿರೋಧಿ'! ಕಾರ್ತಿಕ ದೀಪಂ ವಿವಾದಕ್ಕೆ ಅಣ್ಣಾಮಲೈ ಕೆಂಡಾಮಂಡಲ! | Karthigai Deepam Controversy

K Annamalai: ತಮಿಳುನಾಡಿನ ತಿರುಪರಂಕುಂದ್ರಂ ಬೆಟ್ಟದ ಕಾರ್ತಿಕ ದೀಪಂ ವಿವಾದ ಮತ್ತೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರದ ವಿರುದ್ಧ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಿಂದಿನ ಡಿಎಂಕೆ ಸರ್ಕಾರದಂತೆಯೇ ಟಿವಿಕೆ ಸರ್ಕಾರವೂ 'ದೇವರ ವಿರೋಧಿ' ಎಂಬ ಇಮೇಜ್ ಬೆಳೆಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ನವೆಂಬರ್ 16ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ಮಧುರೈನ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ಕಲ್ಲಿನ ಕಂಬವಾದ 'ದೀಪತ್ತೂಣ್'ನಲ್ಲಿ ಸಾಂಪ್ರದಾಯಿಕ ಕಾರ್ತಿಕ ದೀಪ ಬೆಳಗಿಸುವುದನ್ನು ಟಿವಿಕೆ ಸರ್ಕಾರ ವಿರೋಧಿಸುತ್ತಿದೆ ಎಂದು ಟೀಕಿಸಿದ್ದಾರೆ.

ದೀಪ ಪರಂಪರೆಯ ಭಾಗ

ದೀಪ ಬೆಳಗಿಸುವುದು ಧಾರ್ಮಿಕ ನಂಬಿಕೆ ಮತ್ತು ಪರಂಪರೆಯ ಭಾಗವಾಗಿದ್ದು, ಮದ್ರಾಸ್ ಹೈಕೋರ್ಟ್ ಆದೇಶಗಳ ಹೊರತಾಗಿಯೂ ಸರ್ಕಾರ ವಿವಾದ ಮುಂದುವರಿಸುತ್ತಿದೆ ಎಂದು ಅಣ್ಣಾಮಲೈ ಟೀಕಿಸಿದ್ದಾರೆ. 'ವಿ ದಿ ಲೀಡರ್ಸ್' ರಾಜಕೀಯ ಚಳವಳಿಯ ಸಂಸ್ಥಾಪಕರೂ ಆಗಿರುವ ಅವರು, ಸರ್ಕಾರದ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಕೆ

ಕಾರ್ತಿಕ ದೀಪಂ ವಿವಾದಕ್ಕೆ ಸಂಬಂಧಿಸಿದಂತೆ ನವೆಂಬರ್ 12ರಂದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿರುವ ತಮಿಳುನಾಡು ಸರ್ಕಾರ, ದೇವಸ್ಥಾನ ಮತ್ತು ಬೆಟ್ಟವನ್ನು ಎಎಸ್‌ಐ ವಶಕ್ಕೆ ನೀಡುವುದು ಹಾಗೂ ದೀಪತ್ತೂಣ್‌ನಲ್ಲಿ ಶಾಶ್ವತ ದೀಪ ಬೆಳಗಿಸುವುದು ಸೇರಿದಂತೆ ಹಬ್ಬದ ವೇಳೆ ಇಡೀ ಬೆಟ್ಟದಲ್ಲಿ ದೀಪ ಬೆಳಗಿಸುವ ಬೇಡಿಕೆಗಳನ್ನು ವಿರೋಧಿಸಿದೆ.

ದೀಪ ಬೆಳಗಿಸಲು ಹಿಂದೇಟು

ಈ ನಿಲುವು ಇದೀಗ ವಿಜಯ್ ಸರ್ಕಾರದ ವಿರುದ್ಧ ರಾಜಕೀಯ ಟೀಕೆಗೆ ಕಾರಣವಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ದೀಪತ್ತೂಣ್‌ನಲ್ಲಿ ದೀಪ ಬೆಳಗಿಸಲು ಅವಕಾಶ ನೀಡಬೇಕಿದ್ದರೂ ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸಲು ಹಿಂದೇಟು ಹಾಕುತ್ತಿದೆ ಎಂಬುದು ಬಿಜೆಪಿಯ ಆರೋಪವಾಗಿದೆ.

ಇದನ್ನೂ ಓದಿ: ‘ನೀವೆಲ್ಲಾ ಕಳ್ಳರು...’! ವಿಮಾನ ಲೇಟ್ ಆಗಿದ್ದಕ್ಕೆ ಸ್ಪೈಸ್‌ಜೆಟ್ ಸಿಬ್ಬಂದಿ ಮೇಲೆ ಮುಗಿಬಿದ್ದ ಪ್ರಯಾಣಿಕರು!| SpiceJet viral video

ಕಾರ್ತಿಕ ದೀಪಂ ಆಚರಣೆಗೆ ಸಂಬಂಧಿಸಿದ ಧಾರ್ಮಿಕ ನಂಬಿಕೆ, ನ್ಯಾಯಾಲಯದ ಆದೇಶ ಮತ್ತು ಸರ್ಕಾರದ ನಿಲುವುಗಳ ನಡುವಿನ ಸಂಘರ್ಷ ಇದೀಗ ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ. (ಏಜೆನ್ಸೀಸ್​)