ನ್ಯೂಸ್

ವಿಜಯೇಂದ್ರ ಅಪ್ರಬುದ್ಧ ರಾಜಕಾರಣಿ: ಡಿ.ಕೆ.ಶಿವಕುಮಾರ್ ಟೀಕೆ

ಬೆಂಗಳೂರು: ರಾಹುಲ್ ಗಾಂಧಿ ಪದೇ ಪದೆ ಪರಿಶಿಷ್ಟರ ಬಗ್ಗೆ ಮಾತನಾಡುತ್ತಾರೆ ಹಾಗಾಗಿ ವಾಲ್ಮಿಕಿ ನಿಗಮದ ಹಗರಣ ಹಾಗೂ ಮುಡಾ ಹಗರಣದ ಬಗ್ಗೆ ಮಾತನಾಡಬೇಕು ಎನ್ನುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಪ್ರಬುದ್ಧ ರಾಜಕಾರಣಿ ಎಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದರು.

ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಅವರಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಹಾಗೆ ನೋಡಿದರೆ ವಾಲ್ಮೀಕಿ ಹಗರಣದಲ್ಲಿ ಬ್ಯಾಂಕ್ ಅಧಿಕಾರಿಗಳು ಭಾಗಿಯಾಗಿರುವುದರಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಮಾತನಾಡಬೇಕು.

ಬ್ಯಾಂಕ್ ಗಳು ಕೇವಲ 2 ಗಂಟೆಗಳಲ್ಲಿ ಸಾಲವನ್ನು ಮಂಜೂರು ಮಾಡಿದ್ದು, ಬ್ಯಾಂಕುಗಳ ಅಧಿಕಾರವನ್ನು ಹೊಂದಿರುವ ನಿರ್ಮಲಾ ಸೀತರಾಮನ್ ಅವರ ಮಾತನಾಡಬೇಕು ಎಂದು ವಿಜಯೇಂದ್ರ ಕೇಳುತ್ತಿಲ್ಲ ಯಾಕೆ? ಎಂದು ಡಿಕೆಶಿ ಕೇಳಿದರು.

ಬಿಜೆಪಿ ಹಗರಣಗಳು ಶೀಘ್ರ ಬಹಿರಂಗ

ಬಿಜೆಪಿ ಆಡಳಿತ ಕಾಲದ ಹಗರಣಗಳನ್ನು ನಾವು ಸಧ್ಯದಲ್ಲೇ ಬಹಿರಂಗಪಡಿಸುತ್ತೇವೆ. ಅವರ ಹಗರಣಗಳ ಬಗ್ಗೆ ಬಿಜೆಪಿ ಪಕ್ಷಕ್ಕೂ ಗೊತ್ತಿದೆ. ಅವರ ಅಂತಾರಾಷ್ಟ್ರೀಯ ಮಟ್ಟದಿಂದ ಹಣ ವರ್ಗಾವಣೆಯಾಗಿರುವುದು ಸೇರಿದಂತೆ ಅನೇಕ ವಿಚಾರಗಳಿವೆ.

ವಿಜಯೇಂದ್ರ ಅವರ ತಂದೆ ಮುಖ್ಯಮಂತ್ರಿಯಾಗಿದ್ದಾಗ ಏನೆಲ್ಲಾ ಮಾಡಿದ್ದಾರೆ ಎಂದು ಗೊತ್ತಿದೆ. ಅವರ ತಂದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಯಾಕೆ? ವಿಜಯೇಂದ್ರ ಅವರು ಪ್ರಮಾಣಿಕರಾಗಿಲ್ಲ. ಹೀಗಾಗಿ ಅವರು ಈ ವಿಚಾರದಲ್ಲಿ ಮಾತನಾಡುವ ನೈತಿಕತೆ ಹೊಂದಿಲ್ಲ ಎಂದು ಕುಟುಕಿದರು.

ಮುಡಾ ಹಗರಣ ಮಾಡಿರುವುದು ಬಿಜೆಪಿ. ನಮ್ಮ ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬದವರಿಗೂ ಈ ಅಕ್ರಮಕ್ಕೂ ಸಂಬಂಧವಿಲ್ಲ. ಮುಡಾದವರು ಸಿಎಂ ಕುಟುಂವದ ಜಮೀನನ್ನು ಒತ್ತುವರಿ ಮಾಡಿಕೊಂಡ ಪರಿಣಾಮ ಪರಿಹಾರ ಪಡೆಯಲು ಅರ್ಹರಾಗಿದ್ದು, ಕಾನೂನು ಪ್ರಕಾರವಾಗಿ ಅವರು ಪರಿಹಾರ ಪಡೆದಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬದಲಿ ನಿವೇಶನ ಕೇಳಿದ್ದಾರೆ. ಅದೇ ರೀತಿ ಅನೇಕರು ನಿವೇಶನ ಪಡೆದಿದ್ದಾರೆ. ಮುಡಾದಲ್ಲಿ ಅಕ್ರಮ ನಡೆದಿದ್ದರೆ ಅದು ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದಿದೆ. ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅಕ್ರಮ ನಡೆದಿದೆ. ಈ ಕಾರಣಕ್ಕೆ ನಮ್ಮ ಮುಖ್ಯಮಂತ್ರಿಗಳು 2006ರಿಂದ ಮುಡಾ ಅಕ್ರಮ ತನಿಖೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.