ನ್ಯೂಸ್

ಎಸ್.ಐ.ಟಿ ಮಧ್ಯಂತರ ವರದಿಗೆ ವಿಜಯೇಂದ್ರ ಆಗ್ರಹ | Govt yield pressure

ಮೃತ್ಯುಂಜಯ ಕಪಗಲ್

ಬೆಂಗಳೂರು: ಧರ್ಮಸ್ಥಳದ ಮೇಲಿನ ಆರೋಪಗಳ ಕುರಿತ ತನಿಖೆ ನಡೆಸುತ್ತಿರುವ ಎಸ್.ಐ.ಟಿ ಮಧ್ಯಂತರ ವರದಿ ಕೊಡಬೇಕು. ಮುಸುಕುಧಾರಿ ವ್ಯಕ್ತಿಯ ಬಗ್ಗೆ ತನಿಖೆ ಆಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಶಾಸಕ ಬಿ.ವೈ. ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ.

ವಿಧಾನಸಭೆಯಲ್ಲಿ ಗುರುವಾರ ಈ ವಿಷಯದ ಮೇಲೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳವು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ.ಎಸ್.ಐ.ಟಿ ತನಿಖೆಗೆ ಯಾರ ಒತ್ತಡ ಇದೆ? ಯಾವ ಸಂಘಟನೆಗಳ ಒತ್ತಡ ಇದೆ? ಎಂದು ಕೇಳಿದರು.

ಶ್ರೀ ಕ್ಷೇತ್ರದ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಆಗಿದೆ; ಹಿಂದೂಗಳ ಭಾವನೆಗೆ ಧಕ್ಕೆ ಆಗುತ್ತಿದೆ. ಕೋಟ್ಯಂತರ ಭಕ್ತರು ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇದು ಹಿಟ್ ಆಂಡ್ ರನ್ ಕೇಸ್ ಆಗಬಾರದು ಎಂದು ತಿಳಿಸಿದರು. ಮುಸುಕುಧಾರಿಯ ಪೂರ್ವಾಪರ ಏನು? ಎಂದು ಪ್ರಶ್ನಿಸಿದ ಅವರು ಇದರ ಬಗ್ಗೆ ತನಿಖೆ ಮಾಡಬೇಕಿತ್ತು ಎಂದು ತಿಳಿಸಿದರು.

ಒತ್ತಡವೇ ತನಿಖೆಗೆ ಕಾರಣ

ಎಸ್.ಐ.ಟಿ ತನಿಖೆ ಮಾಡುವುದಿಲ್ಲ ಅಂತ ಹೇಳಿದ ಮಾರನೇ ದಿನವೇ ಎಸ್.ಐ.ಟಿ ರಚಿಸಿದ್ದಾರೆ. ಹಾಗಿದ್ದರೆ ಯಾವ ಸಂಘಟನೆಗಳು ಸಿ.ಎಂ ಮೇಲೆ ಒತ್ತಡ ಹಾಕಿದವು? ಆ ಮುಸುಕುಧಾರಿ ಯಾರು ಅಂತ ತನಿಖೆಗೂ ಮುನ್ನ ಯಾಕೆ ಗೊತ್ತು ಮಾಡಿಕೊಳ್ಳಲಿಲ್ಲ? ಎಂದು ಕೇಳಿದರು.

ಕೋಟ್ಯಂತರ ಭಕ್ತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತ್ತಿದ್ದಾರೆ. ತನಿಖೆ ಸರಿಯಾಗಿ ಆಗಲಿ ಎಂಬುದಾಗಿ ನಾವು ಆಗ್ರಹ ಮಾಡಿದ್ದೇವೆ. ಆದರೆ, ಗುಂಡಿಗಳನ್ನು ಅಗೆಯುವ ಹುಚ್ಚಾಟ ನಡೆಯುತ್ತಿದೆ. ಜನರ ಧಾರ್ಮಿಕ ಭಾವನೆಗಳಿಗೆ ಘಾಸಿ ಆಗಿದೆ.

ಇದು ಹಿಟ್ ಆಂಡ್ ರನ್ ಕೇಸ್ ಆಗಬಾರದು. ತನಿಖೆ ಸಂಬಂಧ ಮಧ್ಯಂತರ ವರದಿ ಬಿಡುಗಡೆ ಮಾಡಬೇಕು. ಈ ಮುಸುಕುಧಾರಿ ವ್ಯಕ್ತಿ, ಆತನ ಹಿಂದೆ ಇರುವ ಕೂಟ ಯಾವುದು ಎಂಬುದರ ತನಿಖೆ ಆಗಬೇಕು ಎಂದರು.

ಶವ ಸಿಗಲಿಲ್ಲ ಎಂಬ ಕಾರಣ ನೀಡಿ ಕೇಸ್ ಮುಚ್ಚಿ ಹಾಕುವುದು ಬೇಡ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದರ ತನಿಖೆ ಆಗಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.