ನ್ಯೂಸ್

ವಿಜಯವಾಣಿ ಸಂಪಾದಕೀಯ: ರೈತರಿಗೆ ಒಂದಿಷ್ಟು ನೆರವು

ರೈತರ ಆದಾಯವನ್ನು 2022ರ ಹೊತ್ತಿಗೆ ದ್ವಿಗುಣಗೊಳಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಧ್ಯವರ್ತಿಗಳ ಹಾವಳಿ ಇಲ್ಲವಾಗಿಸುವುದು, ಕೃಷಿಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡುವುದು ಮತ್ತು ಕೃಷಿಕ್ಷೇತ್ರದಲ್ಲಿ ಮೂಲಸೌಕರ್ಯ ವಿಸ್ತರಿಸುವುದು ಪ್ರಮುಖ ಉದ್ದೇಶವಾಗಿದೆ. ಸದ್ಯ ದೇಶದಲ್ಲಿ ಕೆಲ ರೈತರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ಮುಂದುವರಿಸಿದ್ದಾರೆ. ಮತ್ತು ಹೊಸ ಕಾನೂನಿನ ಅನ್ವಯ ಸರ್ಕಾರ ಬೆಂಬಲ ಬೆಲೆ ವ್ಯವಸ್ಥೆಯನ್ನೇ ಕೊನೆಗೊಳಿಸಲು ಹೊರಟಿದೆ ಎಂಬುದು ಅವರ ಆರೋಪ. ಇದಕ್ಕೆ ಉತ್ತರ ನೀಡಲೆಂಬಂತೆ ಹಿಂಗಾರು ಬೆಳೆಗಳಿಗೆ ಕೇಂದ್ರ ಬೆಂಬಲ ಬೆಲೆ ಘೋಷಿಸಿದೆ. ರೈತರ ಬೇಡಿಕೆಯಷ್ಟು ಬೆಂಬಲ ಬೆಲೆ ಏರಿಕೆ ಆಗಿಲ್ಲ ಎಂಬ ಆಕ್ಷೇಪದ ದನಿಗಳು ಕೇಳಿಬರುತ್ತಿದ್ದರೂ, ಬೆಳೆಗಾರರಿಗೆ ಈ ಬೆಂಬಲ ಬೆಲೆ ಒಂದಿಷ್ಟು ಮಟ್ಟಿಗಾದರೂ ನೆರವಿಗೆ ಬರಲಿದೆ ಎಂಬುದು ತಜ್ಞರ ಅಭಿಪ್ರಾಯ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಮಾನ್ಯ ಮಾಡಿದ ಎಲ್ಲ ಹಿಂಗಾರು ಬೆಳೆಗಳಿಗೆ ಎಂಎಸ್​ಪಿ ಹೆಚ್ಚಿಸಲು ಬುಧವಾರ ನಡೆದ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿದೆ. ಖಾರಿಫ್ (ಮುಂಗಾರು) ಬೆಳೆ ಕಟಾವು ಮಾಡಿದ ಕೂಡಲೇ ಹಿಂಗಾರು ಬೆಳೆಗಳ ಬಿತ್ತನೆ ಕಾರ್ಯ ಅಕ್ಟೋಬರ್​ನಲ್ಲಿ ಶುರುವಾಗಲಿದೆ. ಗೋಧಿಯ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್​ಗೆ 40 ರೂಪಾಯಿ, ಸಾಸಿವೆಗೆ ಕ್ವಿಂಟಾಲ್​ಗೆ 400 ರೂಪಾಯಿ ಹೆಚ್ಚಳವಾಗಲಿದೆ. ಕೇಂದ್ರ ಸರ್ಕಾರವು 2018-19ರ ಮುಂಗಡಪತ್ರದಲ್ಲಿ ಘೋಷಿಸಿದಂತೆ ಅಖಿಲ ಭಾರತ ಮಟ್ಟದ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಹೆಚ್ಚು ಎಂಎಸ್​ಪಿ ಸಿಗುವಂತೆ ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿರುವುದು ಗಮನಾರ್ಹ.

ಉತ್ಪಾದನೆ ಹೆಚ್ಚಾಗಿ ಮಾರುಕಟ್ಟೆಯಲ್ಲಿ ದಿಢೀರ್ ಆಗಿ ಬೆಲೆ ಕುಸಿತವಾದರೆ ಈ ಬೆಂಬಲ ಬೆಲೆ ವ್ಯವಸ್ಥೆ ರೈತರ ಕೈಹಿಡಿಯುವುದರಲ್ಲಿ ಅನುಮಾನವಿಲ್ಲ. ‘ಅನ್ನದಾತರಿಗೆ ಹೆಚ್ಚಿನ ಆದಾಯ ಖಾತರಿಗೊಳಿಸುವ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ. ಇದು ವೈವಿಧ್ಯ ಬೆಳೆ ಬೆಳೆಯುವುದಕ್ಕೆ ಉತ್ತೇಜನ ಒದಗಿಸುವಂಥ ಕ್ರಮವಾಗಿದೆ’ ಎಂದು ಪ್ರಧಾನಿ ಪ್ರತಿಕ್ರಿಯಿಸುವ ಮೂಲಕ, ಈ ನಿರ್ಧಾರದ ಮಹತ್ವ ವಿವರಿಸುವ ಪ್ರಯತ್ನ ಮಾಡಿದ್ದಾರೆ.

ರೈತರು ಬೆಳೆಗಳಿಗೆ ಮಾಡಿದ ಖರ್ಚ ಕೂಡ ಕೈಗೆ ಸಿಗದೇ ಇದ್ದಾಗ ಹತಾಶರಾಗುತ್ತಾರೆ. ಹಾಗಾಗಿ, ಬೆಂಬಲ ಬೆಲೆಯ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗುವ ಮೂಲಕ, ರೈತರಿಗೆ ಸ್ಥೈರ್ಯ ತುಂಬಬೇಕು. ರೈತರ ಪರಂಪರಾಗತ ಕೃಷಿ ಪದ್ಧತಿ ರಕ್ಷಣೆ ಜತೆಗೆ ಸುಸ್ಥಿರ ಅಭಿವೃದ್ಧಿ, ಜೀವನಮಟ್ಟ ಸುಧಾರಣೆ, ಉತ್ಪಾದನೆ ಹಾಗೂ ಉತ್ಪಾದಕತೆ ಹೆಚ್ಚಳದ ಕಡೆಯೂ ಸರ್ಕಾರ ಮನಸ್ಸು ಮಾಡಬೇಕು. ಮುಖ್ಯವಾಗಿ, ಪ್ರತಿಭಟನೆ ನಡೆಸುತ್ತಿರುವ ರೈತರ ಕಳವಳ, ಆತಂಕ ಅರ್ಥ ಮಾಡಿಕೊಳ್ಳುವ ಜತೆಗೆ, ಸ್ಪಂದನೆ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕ್ರಮಗಳನ್ನು ಸರ್ಕಾರ ಮನದಟ್ಟು ಮಾಡಿಕೊಟ್ಟಲ್ಲಿ ಸಮಸ್ಯೆ, ತಪು್ಪಗ್ರಹಿಕೆ ನಿವಾರಿಸಬಹುದು.