ರಷ್ಯಾ ಮತ್ತು ಯೂಕ್ರೇನ್ ನಡುವಣ ಯುದ್ಧ ಎರಡೂವರೆ ತಿಂಗಳು ದಾಟಿ ಮುನ್ನಡೆದಿದೆ. ಯುದ್ಧದ ಪರಿಣಾಮ ಆ ಎರಡು ದೇಶಗಳಿಗೆ ಮಾತ್ರ ಸೀಮಿತವಾಗದೆ, ಜಗತ್ತಿನ ಅನೇಕ ದೇಶಗಳ ಮೇಲೆ ಆರ್ಥಿಕ, ಸಾಮಾಜಿಕ, ಮಾನವೀಯ ಸಂಕಟಗಳನ್ನು ಉಂಟುಮಾಡಿದೆ. ಅಮೆರಿಕ ಹಾಗೂ ಯೂರೋಪ್ ದೇಶಗಳು ಈ ಯುದ್ಧಕ್ಕಾಗಿ ರಷ್ಯಾವನ್ನು ಹೊಣೆಮಾಡಿ, ಅದರ ಮೇಲೆ ಅನೇಕ ಬಗೆಯ ರ್ನಿಬಂಧಗಳನ್ನೂ ವಿಧಿಸಿವೆ. ಭಾರತವು ಈ ವಿಷಯದಲ್ಲಿ ಆರಂಭದಿಂದಲೂ ಜಾಗರೂಕ ನಡೆಯನ್ನು ಅನುಸರಿಸುತ್ತ ಬಂದಿದ್ದು, ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವತ್ತ ಗಮನನೆಟ್ಟಿದೆ. ರಷ್ಯಾದೊಟ್ಟಿಗೆ ಮಿಲಿಟರಿ ಸೇರಿ ನಿಷ್ಟ ಸಂಬಂಧ ಹೊಂದಿರುವುದರಿಂದ ಆ ದೇಶದ ಜತೆ ಸಂಬಂಧ ಹಳಸುವಂಥ ನಡೆ ಅನುಸರಿಸಲು ಆಗದು. ಅದೇ ಸಂದರ್ಭದಲ್ಲಿ, ರಷ್ಯಾ ಮೇಲೆ ಕೆಂಡ ಕಾರುತ್ತಿರುವ ಅಮೆರಿಕದ ಮಿತ್ರತ್ವವನ್ನೂ ಬಿಡಲಾಗದು. ಹೀಗೆ ಸಮತೋಲನ ಸರ್ಕಸ್ ನಡೆಸಬೇಕಾದ ಅನಿವಾರ್ಯ ಸನ್ನಿವೇಶವನ್ನು ಭಾರತ ಜಾಣ್ಮೆಯಿಂದ ನಿಭಾಯಿಸುತ್ತ ಬಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೂರು ದಿನಗಳ ಕಾಲ ಯುರೋಪ್ ದೇಶಗಳಿಗೆ ಪ್ರವಾಸ ಕೈಗೊಂಡಿದ್ದರಲ್ಲಿ ರಷ್ಯಾ&ಯೂಕ್ರೇನ್ ಯುದ್ಧದ ವಿಷಯವೂ ಅಡಕವಾಗಿತ್ತು; ಆ ಭೇಟಿಯಲ್ಲಿ ಅವರು ಕದನ ವಿರಾಮದ ವಿಷಯವನ್ನು ಒತ್ತುನಿಡಿ ಪ್ರತಿಪಾದಿಸಿದರು.
ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಪ್ರಮುಖ ದೇಶಗಳಲ್ಲಿ ರಷ್ಯಾ ಸಹ ಸೇರಿದೆ. ರಷ್ಯಾದ ಮೇಲೆ ಈಗ ಹಲವು ದೇಶಗಳು ವಿವಿಧ ಬಗೆಯ ದಿಗ್ಬಂಧನ ಹೇರಿವೆ. ಆದರೂ, ಅನೇಕ ಯುರೋಪಿಯನ್ ದೇಶಗಳು ತೈಲ ಹಾಗೂ ಅನಿಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿಲ್ಲ ಎಂಬುದು ಬೇರೆಮಾತು. ಈ ಸನ್ನಿವೇಶವನ್ನು ತನಗನುಕೂಲಕರವಾಗಿ ಬಳಸಿಕೊಳ್ಳಲು ತಂತ್ರ ರೂಪಿಸಿರುವ ಭಾರತ, ಕಚ್ಚಾತೈಲವನ್ನು ಪ್ರತಿ ಬ್ಯಾರೆಲ್ಗೆ 70 ಡಾಲರ್ ಅಥವಾ ಅದಕ್ಕೂ ಕಡಿಮೆ ದರದಲ್ಲಿ ಪೂರೈಸುವಂತೆ ರಷ್ಯಾದ ಜತೆ ಮಾತುಕತೆ ನಡೆಸುತ್ತಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ 100 ಡಾಲರ್ಗಿಂತ ಹೆಚ್ಚಿಗೆ ಇರುವ ಸಂದರ್ಭದಲ್ಲಿ, ಈ ಚೌಕಾಸಿ ಲಪ್ರದವಾದಲ್ಲಿ ಭಾರತಕ್ಕೆ ಭಾರಿ ಅನುಕೂಲವಿದೆ. ಏಕೆಂದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಇಂಧನ ದರ ಯಾವಾಗ ಬೇಕಾದರೂ ಏರುವ ಸಂದರ್ಭ ಅಸಹಜವೇನಲ್ಲ. ೆಬ್ರವರಿ 24ರಂದು ರಷ್ಯಾವು ಯೂಕ್ರೇನ್ ಮೇಲೆ ಸಮರ ಆರಂಭಿಸಿದ ದಿನದಿಂದ ಈವರೆಗೆ ಭಾರತವು ರಷ್ಯಾದಿಂದ ಸುಮಾರು 40 ಲಕ್ಷ ಬ್ಯಾರೆಲ್ ಕಚ್ಚಾತೈಲವನ್ನು ರಿಯಾಯಿತಿ ದರದಲ್ಲಿ ತರಿಸಿಕೊಂಡಿದೆ. ಭಾರತವು ತೈಲ ಬಳಕೆಯಲ್ಲಿ ಜಾಗತಿಕವಾಗಿ ಮೂರನೇ ದೊಡ್ಡ ದೇಶವಾಗಿದ್ದು, ತನ್ನ ಅಗತ್ಯದ ಶೇ.80ನ್ನು ಆಮದು ಮಾಡಿಕೊಳ್ಳುತ್ತದೆ ಎಂಬುದನ್ನು ಗಮನಿಸಿದಾಗ, ರಿಯಾಯಿತಿ ದರದ ಪ್ರಯೋಜನದ ಅರಿವಾಗುತ್ತದೆ. ರಷ್ಯಾ&ಯೂಕ್ರೇನ್ ಯುದ್ಧದಿಂದಾಗಿ ಖಾದ್ಯ ತೈಲ ಆಮದಿನ ಮೇಲೂ ಪರಿಣಾಮ ಆಗಿ, ದರ ಕೂಡ ಹೆಚ್ಚಿದೆ. ಈ ಸನ್ನಿವೇಶವನ್ನು ಉಪಯೋಗಿಸಿಕೊಂಡು ದೇಶದಲ್ಲಿಯೇ ಖಾದ್ಯತೈಲ ಉತ್ಪಾದನೆ ಹೆಚ್ಚಿಸಲು ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಇದರ ಪರಿಣಾಮ ತಿಳಿಯಲು ತುಸು ಸಮಯ ಬೇಕಾಗುತ್ತದೆ. ಏನೇ ಇದ್ದರೂ, ಈ ಸವಾಲಿನ ಸಮಯದಲ್ಲಿ ಭಾರತ ರಾಜತಾಂತ್ರಿಕ ಮತ್ತು ವ್ಯಾವಹಾರಿಕ ಕೌಶಲವನ್ನು ಪ್ರದರ್ಶಿಸುತ್ತಿದೆ.