ಚಿತ್ತವು ಅವಲಂಬಿಸಿರುವ ವಸ್ತುವಿನ ಸ್ಥೂಲವಾದ ಅನುಭವವು ವಿತರ್ಕವೆನಿಸುತ್ತದೆ. ಆದರೆ ಸೂಕ್ಷ್ಮವಾದ ಅನುಭವವೇ ವಿಚಾರವೆನಿಸುತ್ತದೆ. ಆಹ್ಲಾದವು ಆನಂದ, ಐಕ್ಯ-ಜ್ಞಾನವು ಅಸ್ಮಿತೆಯಾಗಿದೆ. ಮೊದಲನೆಯದಾದ ಸವಿತರ್ಕ ಸಮಾಧಿಯು ನಾಲ್ಕರಿಂದಲೂ ಕೂಡಿರುತ್ತದೆ. ಎರಡನೆಯದಾದ ಸವಿಚಾರದಲ್ಲಿ ವಿತರ್ಕವಿರುವುದಿಲ್ಲ. ಮೂರನೆಯದಾದ ಸಾನಂದದಲ್ಲಿ ವಿಚಾರವಿರುವುದಿಲ್ಲ. ನಾಲ್ಕನೆಯದು ಆನಂದವಿಲ್ಲದೆ ಅಸ್ಮಿತಾ ಮಾತ್ರವಾಗಿರುವುದು. ಈ ಸಮಾಧಿಗಳೆಲ್ಲ ವಸ್ತುಗಳೆಲ್ಲ ವಸ್ತುವನ್ನು ಅವಲಂಬಿಸಿರುತ್ತದೆ ಎಂದು ಸ್ವಾಮಿ ಆದಿದೇವಾನಂದರು ವಿಶದೀಕರಿಸಿದ್ದಾರೆ.
ಜೀವಾತ್ಮನ ಚರಮ ಲಕ್ಷ್ಯವಾದ ಈಶ್ವರ ಸಾಕ್ಷಾತ್ಕಾರ ಇದರ ಪರಿಧಿಯಿಂದ ಹೊರಗೇ ಉಳಿದು ಹೋಗುವುದು. ಅದನ್ನು ಸಾಧಿಸುವ ಏಕಮಾತ್ರ ಉಪಾಯ ಅಸಂಪ್ರಜ್ಞಾತ ಸಮಾಧಿ. ಅದರ ಲಕ್ಷಣವೇನು? ಪತಂಜಲಿ ಮಹರ್ಷಿಯು ಹೀಗೆ ಹೇಳಿದ್ದಾರೆ: ‘ವಿರಾಮ ಪ್ರತ್ಯಯಾಭ್ಯಾಸಪೂರ್ವಃ ಸಂಸ್ಕಾರ ಶೇಷೋನ್ಯಃ’- ವಿರಾಮ ಪ್ರತ್ಯಯ ಅಂದರೆ, ಸರ್ವವೃತ್ತಿ ನಿರೋಧ ಕಾರಣವಾದ ಪರವೈರಾಗ್ಯವು ಪ್ರತಿಬಾರಿಯ ಅನುಷ್ಠಾನದಿಂದ ಸಿದ್ಧಿಸುವುದು. ಇಂಥ ಕೇವಲ ಸಂಸ್ಕಾರ ಸಹಿತವಾದ ಸಮಾಧಿಯು ಅಸಂಪ್ರಜ್ಞಾತವೆನಿಸುತ್ತದೆ ಎಂಬುದು ಈ ಸೂತ್ರದ ಅರ್ಥ.
ವೇದಗಳ ಕೇವಲ ತೋರಿಕೆಯ ಅರ್ಥದಿಂದ ಬುದ್ದಿ ಕೆಡಿಸಿಕೊಂಡ ಇವರಿಗೆ, ಇವರ ಬುದ್ದಿಗೆ ಸಮಾಧಿ ರೂಪವಾದ ಏಕಾಗ್ರತೆಗೆ ಬೇಕಾಗುವ ಪ್ರಾಮಾಣಿಕ ವಿಷಯಗಳ ನಿಶ್ಚಿತ ಜ್ಞಾನ ಉಂಟಾಗದು. ನಿಜವಾಗಿ ಶ್ರೀ ಹರಿಯನ್ನು ಕೊಂಡಾಡುತ್ತ ಅವನ ಪ್ರೀತ್ಯರ್ಥವಾಗಿ ಸತ್ಕರ್ಮಗಳನ್ನು ಮಾಡುವವರೇ ವೇದಾರ್ಥ ಸಾರವನ್ನು ತಿಳಿದವರು. ಹಾಗಿಲ್ಲದವರು ಪಾಂಡಿತ್ಯದ ಭಾರಮಾತ್ರ ಹೊತ್ತವರು ಎಂದು ಪುರಂದರದಾಸರು ತಿಳಿಸಿದ್ದಾರೆ. ವೇದದಲ್ಲಿ ಹೇಳಿದ ಮುಖ್ಯವಾದ ನಿಷ್ಕಾಮ ಕರ್ಮರೂಪಿ ಜ್ಞಾನೋಪಾಯವನ್ನು ತಿಳಿಯರು. ಸಕಲ ಕರ್ಮವನ್ನೂ ಹರಿಗೆ ಅರ್ಪಿಸಿ ಅವನನುಗ್ರಹದಿಂದ ಜ್ಞಾನ ಹೊಂದುವ ಮತ್ತು ಆ ಜ್ಞಾನವೇ ಮೋಕ್ಷೋಪಾಯವೆಂದು ವಿವರಿಸಿ ಮೋಕ್ಷವೇ ಅದರ ಮುಖ್ಯ ಫಲವೆಂಬ ವೇದದ ಅರ್ಥವನ್ನು ಜ್ಞಾನಿಗಳು ಮಾತ್ರ ತಿಳಿಯುವರು. ಪರಸ್ಪರ ವಿರುದ್ಧಾರ್ಥ ಪ್ರತಿಪಾದಕಗಳಾದ ವಿರೋಧಾಭಾಸಗಳಾದ ವಿಷಯಗಳನ್ನು ಶ್ರವಣಿಸಿದಾಗ್ಯೂ ಮನಸ್ಸು ಚಂಚಲವಾಗದಷ್ಟು ಪರಮಾತ್ಮನ ವಿಷಯದಲ್ಲಿ ದೃಢತೆ ಉಂಟಾಗಬೇಕು. ನಿಶ್ಚಯವಾದ ಮಾರ್ಗವಿಲ್ಲದೆ ಸಾಧನೆ ಮಾಡಲಸಾಧ್ಯ.
ವೇದಾರ್ಥ ನಿರ್ಣಾಯಕಗಳಾದ ವಿಷಯಗಳಲ್ಲಿ ಅಪಾರ ಶ್ರದ್ಧೆ ಉಂಟಾಗಿ ತದನುಸಾರವಾಗಿ ಸಾಧನೆ ಮಾಡಿದಲ್ಲಿ ಬ್ರಹ್ಮಾಪರೋಕ್ಷವಾಗಿ ಅದರಿಂದ ದೃಢ ನಿಷ್ಠೆ ಉಂಟಾಗಿ ‘ಅಸಂಪ್ರಜ್ಞಾತ ಸಮಾಧಿ’ ಎಂಬ ಸ್ಥಿತಿ ಪ್ರಾಪ್ತಿಯಾಗುತ್ತದೆ. ಇದೇ ನಿಷ್ಕಾಮ ಕರ್ಮವೆಂಬ ‘ಯೋಗ’ವನ್ನು ಆಚರಿಸಿದ್ದಕ್ಕೆ ಫಲ ಎಂದು ತಿಳಿಯಬೇಕು.
‘ಭಗವಂತನ ಧ್ಯಾನಸ್ಥಿತಿಯಲ್ಲಿ ಇರುವ ಅಪರೋಕ್ಷ ಜ್ಞಾನಿಯು ಭೇರಿತಾಡನವೇ ಮೊದಲಾದ ಶಬ್ದಗಳಿಗೂ ಚಲಿಸದ ಬಾಹ್ಯ ಪ್ರಜ್ಞಾರಹಿತನಾದ ಆ ಅಸಂಪ್ರಜ್ಞಾತ ಸಮಾಧಿಸ್ಥನಲ್ಲಿ ಇರುವ ಲಕ್ಷಣವ್ಯಾವುವು?’ ಎಂದು ಅರ್ಜುನನು ‘ಸ್ಥಿತಪ್ರಜ್ಞ’ನ ಲಕ್ಷಣವನ್ನು ಕೇಳುತ್ತಾನೆ. ಅಸಂಪ್ರಜ್ಞಾತ ಸಮಾಧಿಸ್ಥನ ಲಕ್ಷಣ, ‘ಮನಸ್ಸಿನ ಕಾಮಾದಿಗಳನ್ನು ತೊರೆದು ಪರಮಾತ್ಮನಲ್ಲಿ ಮನವುಳ್ಳವನಾಗಿ ಪರಮಾತ್ಮನ ಪ್ರಸಾದದಿಂದ ಸಂತುಷ್ಟ ಚಿತ್ತನಾದವನೇ ಸ್ಥಿತನಾದವನೇ ಸ್ಥಿತಪ್ರಜ್ಞನು’. ಇಲ್ಲಿ ಕಾಮಾದಿಗಳೆಂದರೆ ಕಾಮ, ಕ್ರೋಧ, ಮದ, ಮತ್ಸರಾದಿ ಅರಿಷಡ್ವರ್ಗಗಳೆಂದು ಅರ್ಥ. ಅಂದರೆ, ಅಪರೋಕ್ಷ ಜ್ಞಾನಕ್ಕೆ ಅಡ್ಡಿಯನ್ನುಂಟುಮಾಡುವ ಎಲ್ಲ ಪ್ರವೃತ್ತಿಗಳು ಎಂದು ತಿಳಿಯುವುದು. ಮನೋಗತವಾದ ಕಾಮಾದಿಗಳು ಎಂದರೆ ಇವು ನಮ್ಮಲ್ಲಿ ಅಡಗಿದ್ದು ಹೊರಗೆ ಕಾಣಿಸದೆ ಸಮಯ ಬಂದಾಗ ಪ್ರಕಟವಾಗಿ ನಮ್ಮನ್ನು ಕೆಡಿಸುತ್ತದೆ. ಆದುದರಿಂದ ಮನೋಗತವಾಗಿರುವ ವಾಸನಾ ಬೀಜಗಳು ಮೊದಲು ನಾಶವಾಗಬೇಕು. ಸಂತ ಜನರ ಸಂಗದಿಂದ ಅಂತಃಕರಣ ಶುದ್ಧವಾಗಿ ಅಂದರೆ ಕಾಮಾದಿಗಳ ಬೀಜಗಳು ನಾಶವಾಗಬೇಕು.
‘ಸಂಗವಾಗಲಿ| ಸಾಧುಸಂಗವಾಗಲಿ| ಸಂಗದಿಂದ ಲಿಂಗ ದೇಹ ಭಂಗವಾಗಲಿ | ಎಂದು ಶ್ರೀ ವ್ಯಾಸತೀರ್ಥರು ತಿಳಿಸಿರುವರು. ಸತ್ಸಂಗ, ಸತ್ಕಥಾ ಶ್ರವಣಗಳನ್ನು ನಿರಂತರಮಾಡಿ ‘ಅಂತರಮಲಿನ’ವೆಂಬ ಕಾಮಾದಿಗಳ ಬೀಜವೇ ನಾಶವಾಗಬೇಕು.
(ಪ್ರತಿಕ್ರಿಯಿಸಿ: vvsudina@gmail.com)